ಬೆಂಗಳೂರು: ‘ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದೊಡ್ಡವರು. ತಮ್ಮ ಮನೆಯನ್ನು ಮೊದಲು ಶುದ್ಧ ಮಾಡಿಕೊಳ್ಳಲಿ. ಅವರು ನಮ್ಮ ಆಸ್ತಿ ಮುಂಚೆ ಎಷ್ಟಿತ್ತು, ಈಗ ಎಷ್ಟಿದೆ ಎಂದು ಕೇಳುವ ಮುನ್ನ ತಮ್ಮ ಪಕ್ಷದ ನಾಯಕರ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಲಿ.’
ಹೀಗೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲ್ ಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದಾಳಿಗಳು ರಾಜಕೀಯ ಪ್ರೇರಿತ ಎಂಬುದನ್ನು ತಿಳಿಯಬೇಕಾದರೆ, ಎಫ್ಐಆರ್ ಪ್ರತಿ ನೋಡಿ. ಪ್ರಾಥಮಿಕ ತನಿಖೆ ನಡೆದಿದ್ದು ಯಾವಾಗ? ನಾನು ಪಕ್ಷದ ಅಧ್ಯಕ್ಷ ಆಗಿದ್ದು ಯಾವಾಗ? ಎಫ್ಐಆರ್ ದಾಖಲಿಸಿದ್ದು ಯಾವಾಗ? ಎಂಬುದನ್ನು ನೋಡಿ. ಆಗ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ತಿಳಿಸಿದ್ದಾರೆ.
ಏನನ್ನೂ ಗೌಪ್ಯವಾಗಿ ಇಡಲು ಸಾಧ್ಯವಿಲ್ಲ:
ರಾಜಕಾರಣದಲ್ಲಿ ನಾವು ಯಾವುದನ್ನೂ ಗೌಪ್ಯವಾಗಿ ಇಡಲು ಸಾಧ್ಯವಿಲ್ಲ. ಡಿ.ಕೆ. ಸುರೇಶ್ ಅವರ ದೆಹಲಿ ನಿವಾಸದಲ್ಲಿ 1.50 ಲಕ್ಷ, ನಮ್ಮ ಮನೆಯಲ್ಲಿ 1.77 ಲಕ್ಷ, ನನ್ನ ಕಚೇರಿಯಲ್ಲಿ 3.50 ಲಕ್ಷ ರೂಪಾಯಿ ಸಿಕ್ಕಿದೆ. ಊರಿನಲ್ಲಿ ನನ್ನ ತಾಯಿಯವರಿಗೆ ಕೇಳಿದಾಗ, ಅವರು ಏನೂ ತೆಗೆದುಕೊಂಡು ಹೋಗಿಲ್ಲ ಅಂದ್ರು. ಬಾಂಬೆಯ ಮನೆಗೆ ನಾನು ಹೋಗಿ 6 ವರ್ಷ ಆಯ್ತು. ದೆಹಲಿಯ ಮನೆಯಲ್ಲಿ ಏನೂ ಇಲ್ಲ. ಕೆಲವು ಕಾಗದ ಪತ್ರ ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನಮ್ಮ ಸ್ನೇಹಿತರಾದ ಸಚಿನ್ ನಾರಾಯಣ ಅವರ ಮನೆಯಲ್ಲಿ ಅವರ ವ್ಯವಹಾರಕ್ಕೆ ಸಂಬಂಧಿಸಿದ 50 ಲಕ್ಷ ರುಪಾಯಿ ಸಿಕ್ಕಿದೆಯಂತೆ. ಸಚಿನ್ ಅವರ ಜತೆ ಮಾತನಾಡಲು ಅವರು ಇನ್ನು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಧವನಂ ಬಿಲ್ಡರ್ಸ್ ಹತ್ರ ದಾಖಲೆ ಪತ್ರ ತೆಗೆದುಕೊಂಡು ಹೋಗಿದ್ದಾರೆ. ನಿಮಗೆ ಬೇಕು ಎಂದರೆ ಪಂಚನಾಮ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.