ಬೆಂಗಳೂರು: ಆರ್.ಆರ್. ನಗರ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ವೋಟರ್ ಐಡಿ ಕಲೆಕ್ಟ್ ಮಾಡುತ್ತಿದ್ದು, ಮತದಾನವನ್ನು ತಡೆಯುವುದು ಅವರ ಉದ್ದೇಶವಾಗಿದೆ. ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಾವು ಕಾಂಗ್ರೆಸ್ ಪಕ್ಷ ಬಿಡಲು ಡಿ.ಕೆ. ಶಿವಕುಮಾರ್ ಕಾರಣವೆಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ನೀಡಿದ್ದಕ್ಕೆ ಡಿಕೆಶಿ ಪ್ರತಿಕ್ರಿಯಿಸಿ, ಹಬ್ಬದ ದಿನ ನನ್ನ ಬಗ್ಗೆ ಮಾತನಾಡಿದ್ದಾರೆ. ಬಹಳ ಸಂತೋಷ, ಅವರಿಗೆಲ್ಲ ಆದಷ್ಟು ಬೇಗ ಪ್ರಮೋಷನ್ ಸಿಗಲಿ. ನನ್ನ ಬಗ್ಗೆ ಮಾತನಾಡಿದರೆ ಅವರಿಗೆ ಪ್ರಚಾರ ಸಿಗುತ್ತದೆ ಎಂದು ಹೇಳಿದ್ದಾರೆ.
ನನಗೆ ಸಿದ್ದರಾಮಯ್ಯನವರಿಗೆ ಮಾರ್ಕೆಟ್ ನಲ್ಲಿ ಒಳ್ಳೆಯ ಬೆಲೆ ಇದೆ. ನಮ್ಮ ಬಗ್ಗೆ ಮಾತನಾಡಿದರೆ ಅವರಿಗೆ ಪ್ರಚಾರ ಸಿಗುತ್ತದೆ. ಹೀಗಾಗಿ ನಮ್ಮ ಬಗ್ಗೆ ಮಾತನಾಡುತ್ತಾರೆ ಅವರಿಗೆ ಒಳ್ಳೆಯದಾಗಲಿ. ಸಚಿವರಾದ ಸಿ.ಟಿ. ರವಿ ಎಸ್.ಟಿ. ಸೋಮಶೇಖರ್, ಆರ್. ಅಶೋಕ ನಮ್ಮ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ. ಏನೇನಿದೆಯೋ ಎಲ್ಲವನ್ನೂ ಹುಡುಕಲಿ ಎಂದು ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಈಗ ಅಪ್ರಸ್ತುತವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಿಎಂ ಹುದ್ದೆ ಬಗ್ಗೆ ಮಾತನಾಡಿದವರ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ನಾಯಕ ಕೋಳಿವಾಡ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಶಿಸ್ತುಪಾಲನಾ ಸಮಿತಿ ಈ ಕುರಿತು ಕ್ರಮ ಕೈಗೊಳ್ಳುತ್ತದೆ. ಸಮಿತಿ ತನ್ನ ಜವಾಬ್ದಾರಿ ನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.