ಬೆಂಗಳೂರು: ರಾಜ್ಯಕ್ಕೆ ಶಾಶ್ವತ ಪರಿಹಾರವಾಗಿ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ:
ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ಜನರ ನೋವು ಗಮನಿಸಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಇಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನರ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗಿನ ಸರ್ಕಾರ ಮನೆ, ಆಸ್ತಿ ಕಳೆದುಕೊಂಡವರಿಗೆ ಇದುವರೆಗೂ ತಾವು ಘೋಷಿಸಿದ ಪರಿಹಾರವನ್ನು ಕೊಟ್ಟಿಲ್ಲ ಎಂದು ದೂರಿದ್ದಾರೆ.
ಮನೆ ಬಾಡಿಗೆಗೆ 5 ಸಾವಿರ ಕೊಡುತ್ತೇವೆ ಎಂದು ಸರ್ಕಾರ ಘೋಷಿಸಿತ್ತು. ಕೇವಲ 3-4 ತಿಂಗಳು ಮಾತ್ರ ಕೊಟ್ಟು, ನಂತರ ಕೈತೊಳೆದುಕೊಂಡಿದೆ. ಆನಂತರ ಮನೆಯನ್ನೂ ಕೊಟ್ಟಿಲ್ಲ, ಬಾಡಿಗೆಯನ್ನೂ ಕೊಟ್ಟಿಲ್ಲ ಎಂದು ಅಲ್ಲಿನ ಜನ ಗೋಳು ತೋಡಿಕೊಂಡರು. ನಾವು ಈ ಪ್ರದೇಶಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಂಟಿಯಾಗಿ ಕಾವೇರಿ ಜಲಾನಯನ ಪ್ರದೇಶಗಳ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು 10 ಸಾವಿರ ಕೋಟಿ ರುಪಾಯಿಯ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ರಾಜ್ಯದ 25 ಬಿಜೆಪಿ ಸಂಸದರ ಜತೆಗೆ ಬೇಕಾದರೆ ನಮ್ಮ ಪಕ್ಷದ ಸಂಸದರನ್ನು ಕರೆದುಕೊಂಡು ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಕೇಂದ್ರದ ಮೇಲೆ ಪರಿಹಾರ ಪ್ಯಾಕೇಜ್ ಗಾಗಿ ಒತ್ತಡ ಹೇರಬೇಕಿದೆ. ವಿಧಾನಮಂಡಲದ ಅಧಿವೇಶನ ಕರೆದು ಈ ವಿಚಾರವಾಗಿ ಚರ್ಚಿಸಲಿ. ನಾವು ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಇದನ್ನು ಪಕ್ಷ, ರಾಜಕೀಯವಾಗಿ ನೋಡದೇ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದಾರೆ.
ಕಳೆದ ವರ್ಷ ನೆರೆಯಿಂದ ರಾಜ್ಯದಲ್ಲಿ 35 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ 1800 ಕೋಟಿ ಪರಿಹಾರ. ಆದರೆ ಇವತ್ತಿಗೂ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಕಾಂಗ್ರೆಸ್ ಎಲ್ಕ ಜಿಲ್ಲಾಧ್ಯಕ್ಷರ ಜತೆ ಮಾತನಾಡಿ, ಮಾಹಿತಿ ಪಡೆದಿದ್ದೇನೆ. ಪಕ್ಷದಿಂದ ಆರು ತಂಡಗಳನ್ನು ರಚನೆ ಮಾಡಿದ್ದು, ಈ ತಂಡಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರ್ಕಾರದ ಆಶ್ವಾಸನೆ ಎಷ್ಟರ ಮಟ್ಟಿಗೆ ಜಾರಿಯಾಗಿದೆ? ಪ್ರವಾಹದಿಂದ ಆಗಿರುವ ನಷ್ಟ ಎಷ್ಟು ಎಂಬ ಬಗ್ಗೆ ಪರಿಶೀಲನೆ ನಡೆಸಲಿವೆ ಎಂದು ಹೇಳಿದ್ದಾರೆ.
ಸಚಿವ ಆರ್. ಅಶೋಕ್ ಅವರ ಹೇಳಿಕೆ ಕುರಿತಾಗಿ ಉತ್ತರಿಸಿದ ಡಿ.ಕೆ ಶಿವಕುಮಾರ್, ಕೆಲವರಿಗೆ ನನ್ನ ಹೆಸರು ತೆಗೆದುಕೊಳ್ಳದಿದ್ದರೆ ಸಮಾಧಾನನಾಗುವುದಿಲ್ಲ. ಅವರ ಪಕ್ಷದಲ್ಲಿ ಅವರಿಗೆ ಮಾನ್ಯತೆ ಸಿಗುವುದಿಲ್ಲ. ಅದನ್ನು ಪಡೆಯಲು ಈ ರೀತಿ ಮಾತನಾಡುತ್ತಾರೆ. ನಾನು ಅವರ ಬಗ್ಗೆ ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.