ಬೆಂಗಳೂರು: ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 50 ಲಕ್ಷ ರೈತರ ಖಾತೆಗಳಿಗೆ 1 ಸಾವಿರ ಕೋಟಿ ರೂಪಾಯಿ ಹಣವನ್ನು ಮೊದಲ ಕಂತಿನಲ್ಲಿ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೇಗಿಲಯೋಗಿ ಅನ್ನದಾತನ ರಕ್ಷಣೆ ನಮ್ಮ ಸರ್ಕಾರದ ಆದ್ಯತೆ. ಭಾರತ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ 6 ಸಾವಿರ ರೂ. ನಗದು ನೆರವಿನ ಜೊತೆಗೆ ನಮ್ಮ ಸರ್ಕಾರ ಹೆಚ್ಚುವರಿಯಾಗಿ 4 ಸಾವಿರ ರೂ. ಆರ್ಥಿಕ ನೆರವಿನ 2 ಸಾವಿರ ರೂ. ಮೊದಲ ಕಂತನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ಅರ್ಹ ರೈತರಿಗೆ 2020 -21 ನೇ ಸಾಲಿನಲ್ಲಿ ಬೆಳೆ ಸಾಲ ನೀಡುವ ಗುರಿಹೊಂದಲಾಗಿದೆ. 14.50 ಸಾವಿರ ಕೋಟಿ ರೂಪಾಯಿ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ 3175 ಕೋಟಿ ರೂಪಾಯಿ ಮೌಲ್ಯದ ಕಡಲೆಕಾಳು, ಕೊಬ್ಬರಿ, ಶೇಂಗಾ, ಹೆಸರು ಕಾಳು ಮೊದಲಾದವುಗಳನ್ನು ರೈತರಿಂದ ಖರೀದಿಸಿ ಬೆಲೆ ಕುಸಿತವಾದ ಸಂದರ್ಭದಲ್ಲಿ ನೆರವಾಗಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.