ದೇಶದಾದ್ಯಂತ ಮೂರನೇ ಹಂತದ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು, 60 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಕಾಯಿಲೆಗೊಳಗಾದವರಿಗೆ ಲಸಿಕೆ ನೀಡಲಾಗುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಲಸಿಕೆ ಪಡೆದುಕೊಳ್ಳುವ ಮೂಲಕ ದೇಶದ ಜನತೆಗೆ ಲಸಿಕೆ ಹಾಕಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.
ಆದರೂ ಕೂಡ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ವರದಿಗಳ ಮಧ್ಯೆ ಗದಗ ಜಿಲ್ಲೆ ಜಕ್ಕಲಿ ಗ್ರಾಮದ ಜಾನಪದ ಕಲಾವಿದ ವೀರಪ್ಪ ಕಾಳಿ ಎಂಬವರು ಡಂಗುರ ಬಾರಿಸುವ ಮೂಲಕ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಅವರ ಡಂಗುರದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ. ಜೊತೆಗೆ ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೂ ಟ್ಯಾಗ್ ಮಾಡಿದ್ದಾರೆ.
ಸಾಂಪ್ರದಾಯಿಕ ಪದ್ಧತಿ ಮೂಲಕ ಡಂಗುರ ಬಾರಿಸಿ ಕೊರೊನಾ ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಡಾ. ಕೆ. ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.