
ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ ನಲ್ಲಿ ಬರೋಬ್ಬರಿ ಶೇಕಡ 45 ರಷ್ಟು ಮಂದಿಗೆ ಸೋಂಕು ತಗುಲಿರುವುದಾಗಿ ಅಧ್ಯಯನವೊಂದರಲ್ಲಿ ಗೊತ್ತಾಗಿದೆ.
ಆಗಸ್ಟ್ ಅಂತ್ಯದ ವೇಳೆಗೆ ರಾಜ್ಯದ ಜನಸಂಖ್ಯೆಯ ಶೇಕಡ 44.5 ರಷ್ಟು ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಭಾರತೀಯ ಮತ್ತು ಅಮೆರಿಕನ್ ಸಂಶೋಧಕರ ತಂಡ ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಗೊತ್ತಾಗಿದೆ.
‘ಕರ್ನಾಟಕ ಸಿರೋಪ್ರಿವೆಲೆನ್ಸ್ ಸ್ಟಡಿ’ ಎಂಬ ಶೀರ್ಷಿಕೆಯಲ್ಲಿ ಜೂನ್ 15 ರಂದು ಸಮೀಕ್ಷೆ ಆರಂಭಿಸಿದ್ದು, ಆಗಸ್ಟ್ 29 ರವರೆಗೆ ಅಧ್ಯಯನ ನಡೆಸಲಾಗಿದೆ.
ಉತ್ತರ ಕೆರೊಲಿನಾದ ಡ್ಯೂಕ್ ವಿಶ್ವವಿದ್ಯಾಲಯ, ಚಿಕಾಗೋ ವಿಶ್ವವಿದ್ಯಾಲಯ, ಸೆಂಟರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ನೇತೃತ್ವದಲ್ಲಿ ಅಧ್ಯಯನ ಸರ್ವೇ ನಡೆಸಲಾಗಿದೆ. ಆಗಸ್ಟ್ 2020 ರ ಅಂತ್ಯದ ವೇಳೆಗೆ 3.15 ಕೋಟಿ ನಿವಾಸಿಗಳು ವೈರಸ್ ಸೋಂಕಿಗೆ ಒಳಗಾಗಿದ್ದರು ಎನ್ನುವುದು ತಿಳಿದುಬಂದಿದೆ. ಸೋಂಕಿನಿಂದ ಚೇತರಿಸಿಕೊಂಡಿರುವ ಸಂಖ್ಯೆ 1.93 ಕೋಟಿಗಿಂತಲೂ ಹೆಚ್ಚಾಗಿದೆ ಎಂದು ಹೇಳಲಾಗಿದೆ.