ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಮೋಹನ್ ಕುಮಾರ್ ಗೆ ಹಣ ದುರ್ಬಳಕೆ ಪ್ರಕರಣದಡಿ 6 ವರ್ಷ ಕಠಿಣ ಸಜೆ ಮತ್ತು 2 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
ತರೀಕೆರೆಯ ಹಿರಿಯ ಜೆಎಂಎಫ್ ನ್ಯಾಯಾಲಯ ತೀರ್ಪು ನೀಡಿದೆ. ಆರೋಪಿ ಕರ್ತವ್ಯ ನಿರ್ವಹಿಸುವಾಗ 1,29,08,451 ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾಗಿದೆ. ವಿವಿಧ ಹಂತಗಳಲ್ಲಿ ಮೇಲಾಧಿಕಾರಿಗಳ ಸಹಿಯನ್ನು ನಕಲು ಮಾಡಿ ಸರ್ಕಾರಕ್ಕೆ ವಂಚಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದಾನೆ.
10 ವರ್ಷಗಳ ಹಿಂದೆ ಪ್ರಕರಣ ನಡೆದಿದ್ದು ಡಿವೈಎಸ್ಪಿ ಮಲ್ಲಿಕಾರ್ಜುನಪ್ಪ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಎಂ.ಸಿ. ನಂಜೇಗೌಡರು ವಿಚಾರಣೆ ನಡೆಸಿ ಆರೋಪಿಗೆ ಕಠಿಣ ಸಜೆ ಮತ್ತು 2 ಕೋಟಿ ರೂಪಾಯಿ ಹಣವನ್ನು ಸರ್ಕಾರಕ್ಕೆ ಕಟ್ಟುವಂತೆ ಶಿಕ್ಷೆ ವಿಧಿಸಿದ್ದಾರೆ.
ದಂಡ ಕಟ್ಟಲು ವಿಫಲವಾದಲ್ಲಿ ಮೂರು ವರ್ಷದ ಸಜೆ ವಿಧಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಗೋವಿಂದರಾಜ್ ವಾದ ಮಂಡಿಸಿದ್ದರು. ಚನ್ನಗಿರಿ ತಾಲೂಕಿನ ಮೋಹನ್ ಕುಮಾರ್ ಪತ್ನಿ ಕೊಲೆ ಆರೋಪದಲ್ಲಿ ಶಿವಮೊಗ್ಗ ನ್ಯಾಯಾಲಯದಿಂದ 2017 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದಾನೆ.