ಬೆಂಗಳೂರು: ಕೊರೋನಾ ಆರ್ಭಟಕ್ಕೆ ಬೆಚ್ಚಿಬಿದ್ದ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಇಲ್ಲಿದೆ. ಮುಂದಿನ ಮೂರು ತಿಂಗಳು ಕೊರೋನಾ ಮತ್ತಷ್ಟು ಅಪಾಯಕಾರಿ ಆಗಲಿದೆ ಎಂದು ಹೇಳಲಾಗಿದೆ.
ವೆದರ್ ಸಾಥ್ ನೀಡಿದಲ್ಲಿ ಕೊರೋನಾ ಆರ್ಭಟ ಡಿಸೆಂಬರ್ ವರೆಗೂ ಹೆಚ್ಚಾಗಲಿದೆ. ಆರು ತಿಂಗಳಲ್ಲಿ ಕೊರೋನಾ ವೈರಸ್ ಡೆಡ್, ನಿಷ್ಕ್ರಿಯ ಆಗಬಹುದು ಎಂದು ತಜ್ಞರು ಲೆಕ್ಕಾಚಾರ ಹಾಕಿದ್ದರು. ಆದರೆ, ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಸೋಂಕು ವ್ಯಾಪಕವಾಗಿ ಹರಡುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 5012 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು 34 ಮಂದಿ ಸಾವನ್ನಪ್ಪಿದ್ದಾರೆ. 3000 ಹೊಸ ಪ್ರಕರಣಗಳು ದಾಖಲಾಗುತ್ತಿದ್ದ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆಯಾಗಿದ್ದು ನಿನ್ನೆ 5000 ಗಡಿ ದಾಟಿದೆ. ಕಳೆದ 10 ದಿನದ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೊರೋನಾ ಆರ್ಭಟ ಜಾಸ್ತಿಯಾಗಿದ್ದು 35,599 ಮಂದಿಗೆ ಸೋಂಕು ತಗುಲಿದೆ. 289 ಜನ ಸೋಂಕಿತರು ಮೃತಪಟ್ಟಿದ್ದಾರೆ.
ಚಳಿಗಾಲ ಹತ್ತಿರವಾಗುತ್ತಿದೆ. ಚಳಿಗಾಲದಲ್ಲಿ ಕೊರೋನಾ ಸೋಂಕು ಹೆಚ್ಚಾಗಲಿದ್ದು ನ್ಯೂಮೋನಿಯಾ ಪ್ರಕರಣ ಕೂಡ ಜಾಸ್ತಿಯಾಗಿದೆ. ನ್ಯೂಮೋನಿಯಾ ಇರುವವರಿಗೆ ಕೊರೋನಾ ಸೋಂಕು ತಗಲಿದ್ದಲ್ಲಿ ಪ್ರಾಣಕ್ಕೆ ಕುತ್ತು ಬರುವ ಅಪಾಯವಿದೆ ಎನ್ನಲಾಗಿದೆ. ಶ್ವಾಸಕೋಶ ಸಂಬಂಧಿ ಕಾಯಿಲೆ, ಅಸ್ತಮಾ ರೋಗಿಗಳಿಗೆ ಸೋಂಕು ತಗುಲಿದರೆ ಅಪಾಯವಾಗಬಹುದಾದ ಎಂದು ಹೇಳಲಾಗಿದೆ.