ಬೆಂಗಳೂರು: ರಾಜ್ಯದ ಶಿರಾ, ಆರ್.ಆರ್. ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯವಾಗುತ್ತಿದ್ದಂತೆ ಕೊನೆ ಹಂತದ ಮತ ಬೇಟೆಗೆ ಅಭ್ಯರ್ಥಿಗಳು ಮುಂದಾಗಿದ್ದಾರೆ.
ಮನೆ ಮನೆಗೆ ತೆರಳಿ ಮತದಾರರನ್ನು ಸೆಳೆಯಲು ಮುಂದಾಗಿದ್ದು, ಅಭ್ಯರ್ಥಿಗಳ ಬೆಂಬಲಿಗರು, ಕಾರ್ಯಕರ್ತರು ಮನೆ, ಮನೆಗೆ ತೆರಳಿ ಮತಯಾಚಿಸಿದ್ದಾರೆ. 5 ಕ್ಕಿಂತ ಹೆಚ್ಚು ಜನ ಮನೆ ಪ್ರಚಾರಕ್ಕೆ ಹೋದರೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಚುನಾವಣೆ ಆಯೋಗ ತಿಳಿಸಿದೆ.
ಮತದಾನಕ್ಕೆ ಒಂದೇ ದಿನ ಬಾಕಿ ಉಳಿದಿರುವಂತೆ ಕೊನೆ ಕ್ಷಣದಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ನಾಳೆ ಬೆಳಗ್ಗೆಯಿಂದ ಮತದಾನ ಆರಂಭವಾಗಲಿದ್ದು, ಕೊರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ.
ವಿಶೇಷ ಚೇತನರು, ವೃದ್ಧರು, ಸೋಂಕಿತರಿಗೆ ಶಿರಾದಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡಿದ್ದು, ಆರ್.ಆರ್. ನಗರದಲ್ಲಿ ಮತಗಟ್ಟೆಗೆ ಬಂದು ಮತ ಹಾಕಲು ಸೋಂಕಿತರಿಗೆ ವ್ಯವಸ್ಥೆ ಮಾಡಲಾಗಿದೆ.