alex Certify ಕೊರೋನಾ ಆಸ್ಪತ್ರೆ ಸಿಬ್ಬಂದಿಗೆ ಗುಡ್ ನ್ಯೂಸ್: ವೇತನ ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಆಸ್ಪತ್ರೆ ಸಿಬ್ಬಂದಿಗೆ ಗುಡ್ ನ್ಯೂಸ್: ವೇತನ ಹೆಚ್ಚಳ

ಬೆಂಗಳೂರು: ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ, ವಿಶೇಷವಾಗಿ ಅರೆ ವೈದ್ಯಕೀಯ ಸಿಬ್ಬಂದಿ, ಲಿಫ್ಟ್ ಆಪರೇಟರ್ ಹಾಗೂ ಸ್ವಚ್ಛತಾಗಾರರ ಶ್ರಮವನ್ನು ಗಮನಿಸಿ ಅವರ ವೇತನವನ್ನು ಹೆಚ್ಚು ಮಾಡುವ ಸಂಬಂಧ ಈಗಾಗಲೇ ಮಾತುಕತೆ ನಡೆದಿದೆ. ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವೇತನವನ್ನು ಹೆಚ್ಚು ಮಾಡಲು ಕೂಡಲೇ ಕ್ರಮ ವಹಿಸಲಾಗುವುದು.

ಕಂದಾಯ ಸಚಿವ ಆರ್. ಅಶೋಕ್ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿಲ್ಲ. ಅಲ್ಲಿನ ರೋಗಿಗಳಿಗೆ ಗುಣಮಟ್ಟದ ಊಟ ದೊರೆಯುತ್ತಿಲ್ಲ ಎಂದು ಕೇಳಿ ಬಂದ ದೂರುಗಳ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಖುದ್ಧು ನೀಡಿದ ಸಚಿವರು ರೋಗಿಗಳಿಗೆ ನೀಡುವ ಊಟದಲ್ಲಿ ತುಪ್ಪ, ಉಪ್ಪಿನ ಕಾಯಿ, ಚಪಾತಿ, ರಾಗಿ ಮುದ್ದೆ, ಅನ್ನ ಮತ್ತು ಸಾಂಬಾರ್ ಹೀಗೆ ರೋಗ ನಿರೋಧಕ ಶಕ್ತಿ ವೃದ್ಧಿಸಲು ಪೂರಕವಾದ ಆಹಾರ ಪದಾರ್ಥಗಳನ್ನು ನೀಡಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಶಾಂತಿನಗರದಲ್ಲಿರುವ 20 ಹಾಸಿಗಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 40 ಲಕ್ಷ ರೂ ಬಿಡುಗಡೆ ಮಾಡಲಾಗಿದೆ. ಏಡ್ಸ್ ನಿಯಂತ್ರಣಾ ಸಂಸ್ಥೆಯ ಕಚೇರಿಯನ್ನು 75 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲು ರಾಜ್ಯ ವಿಪತ್ತು ಸ್ಪಂದನಾ ನಿಧಿಯಿಂದ 40 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಶಾಶ್ವತ ರೋಗಿ ಸಾಗಣಾ ವಾಹನ (ಆಂಬುಲೆನ್ಸ್) ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ. ಅಲ್ಲದೆ, ವಿಕ್ಟೋರಿಯ ಆಸ್ಪತ್ರೆಯಲ್ಲಿ ಆರು ಆಂಬ್ಯುಲೆನ್ಸ್ ಗಳನ್ನು ಆರು ತಿಂಗಳ ಮಟ್ಟಿಗೆ ಬಾಡಿಗೆ ಆಧಾರದಲ್ಲಿ ಪಡೆದುಕೊಂಡು ನಿರ್ವಹಣೆ ಮಾಡಲು ಸೂಚಿಸಲಾಗಿದೆ.

ಆಯುಷ್ ಇಲಾಖೆಯ 85 ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ವಾರಾಂತ್ಯದೊಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡುಗಳ ಸದಸ್ಯರುಗಳ ಸಭೆ ಕರೆಯಲಾಗುತ್ತಿದೆ. ಮಾಹಾನಗರ ಪಾಲಿಕೆಯಲ್ಲಿ 198 ವಾರ್ಡುಗಳಿದ್ದು, ಪ್ರತಿ 70 ಸದಸ್ಯರು ಒಳಗೊಂಡ ಮೂರು ವಿಭಾಗಗಳನ್ನಾಗಿ ಮಾಡಿ ಎಲ್ಲಾ ಸದಸ್ಯರೊಂದಿಗೆ ಚರ್ಚಿಸಲಾಗುವುದು. ಪ್ರತಿ ವಾರ್ಡ್‍ನಲ್ಲಿ ಆಯಾ ವಾರ್ಡಿನ ಕಾರ್ಪೋರೇಟರ್ ಕೋವಿಡ್ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಪಡೆದು, ಕೋವಿಡ್ – 19 ರೋಗ ಪತ್ತೆಯಾದವರನ್ನು ಆಸ್ಪತ್ರೆಗೆ ಕಳುಹಿಸುವುದು, ಅವರ ಮನೆಯ ಹಾಗೂ ಆ ಪ್ರದೇಶವನ್ನು ಸೀಲ್‍ಡೌನ್ ಮಾಡುವುದು, ಸೀಲ್‍ಡೌನ್ ಆದ ಪ್ರದೇಶಕ್ಕೆ ಊಟದ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಒದಗಿಸುವುದು ಅವರ ಕರ್ತವ್ಯವಾಗಿರುತ್ತದೆ. ಕಂದಾಯ ಇಲಾಖೆಯ ಸೇವೆಯಲ್ಲಿರುವ ಖಾಯಂಪೂರ್ವ ಅವಧಿಯ 20 ತಹಸೀಲ್ದಾರ್‍ಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ನೇಮಕ ಮಾಡಿ ಕಾರ್ಯ ನಿರ್ವಹಿಸಲು ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 198 ವಾರ್ಡ್‍ಗಳಿದ್ದು, ಪ್ರತಿ ವಾರ್ಡ್‍ಗೆ ಸರ್ಕಾರೇತರ ಸಂಸ್ಥೆಗಳ ಹತ್ತು ಸದಸ್ಯರನ್ನು ನೇಮಕ ಮಾಡಲಾಗುವುದು. ಈ ಸ್ವಯಂ ಸೇವಕರು ಕೋವಿಡ್ –19 ರೋಗ ಪತ್ತೆಯಾದವರನ್ನು ಆಸ್ಪತ್ರೆಗೆ ಕಳುಹಿಸುವುದು, ಅವರ ಮನೆಯ ಹಾಗೂ ಆ ಪ್ರದೇಶವನ್ನು ಸ್ಯಾನಿಟೈಸ್ ಮಾಡಿಸುವುದು ಸೀಲ್‍ಡೌನ್ ಮಾಡುವುದು, ಸೀಲ್‍ಡೌನ್ ಆದ ಪ್ರದೇಶಕ್ಕೆ ಊಟದ ಮತ್ತಿತರ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಕೋವಿಡ್ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಅಧಿಕಾರಿಗಳ ನೇಮಕ

ಕೋವಿಡ್ ರೋಗ ಹೊಂದಿರುವ ರೋಗಿಗಳಿಗೆ ಹಾಸಿಗೆಗಳ ಹಂಚಿಕೆಯನ್ನು ಮಾಡಲು ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರನ್ನು ನೇಮಕ ಮಾಡಲಾಗಿದೆ. ಕೋವಿಡ್ ಹಾಸಿಗೆ ಕೇಂದ್ರಗಳನ್ನು ಸ್ಥಾಪಿಸಲು ಐಎಎಸ್ ಅಧಿಕಾರಿ ರಾಜೇಂದ್ರ ಕಠಾರಿಯಾ ಅವರನ್ನು ನೇಮಕ ಮಾಡಲಾಗಿದೆ.

ಮಾಸ್ಕ್ ಹಾಕದಿದ್ದರೆ ದಂಡ

ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು(ಮಾಸ್ಕ್) ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸದೆ ಇರುವವರಿಗೆ ದಂಡವನ್ನು ಹಾಕರಲಾಗುತ್ತಿದೆ. ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ಮಾಸ್ಕ್ ಹಾಕದ ಒಟ್ಟು 2280 ಪ್ರಕರಣಗಳು ದಾಖಲಾಗಿದ್ದು, ದಂಡದ ರೂಪದಲ್ಲಿ 4.85 ಲಕ್ಷ ರೂ ಗಳನ್ನು ವಸೂಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿ ವಾರ್ಡ್‍ಗೆ ಎರಡು ಚಿರಶಾಂತಿ ವಾಹನಗಳು

ಕೋವಿಡ್‍ನಿಂದ ಮೃತರಾದವರ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲು ಪಾಲಿಕೆಯ ಪ್ರತಿ ವಾರ್ಡ್‍ಗೆ ಎರಡು ಚಿರ ಶಾಂತಿ ವಾಹನಗಳನ್ನು ಸರ್ಕಾರದಿಂದ ಒದಗಿಸಲಾಗುವುದು. ಒಂದು ವಾಹನದಲ್ಲಿ ಪಾರ್ಥಿವ ಶರೀರದೊಂದಿಗೆ ವಾಹನ ಚಾಲಕನೂ ಒಳಗೊಂಡಂತೆ ನಾಲ್ವರು ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಕೋವಿಡ್ ಸೋಂಕಿತರ ಪ್ರದೇಶವನ್ನು ಸ್ಯಾನಿಟೈಸ್ ಮಾಡಲು ಎರಡು ಮಿಕ್ಸ್ಡ್ ಕ್ಯಾನನ್ ಸೋಡಿಯಂ ಹೈಡ್ರೋ ಕ್ಲೋರೈಡ್ ದ್ರಾವಣ ಸಿಂಪಡನಾ ವಾಹನಗಳನ್ನುಖರೀದಿಸಲಾಗಿದೆ. ಇನ್ನೂ ಹೆಚ್ಚಿನ ವಾಹನಗಳನ್ನು ಹಂತ ಹಂತವಾಗಿ ಖರೀದಿ ಮಾಡಲಾಗುವುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...