ಬೆಂಗಳೂರು: ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೋವಿಡ್-19 ಪ್ರಕರಣಗಳು ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂಬ ತಜ್ಞರ ಅಭಿಪ್ರಾಯವನ್ನು ಆಧರಿಸಿ ಕೊರೊನಾ ಮಹಾಮಾರಿಯನ್ನು ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಕಂದಾಯ ಸಚಿವ ಆರ್. ಅಶೋಕ್, ಭಾನುವಾರ ತಾವು ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಹಾಗೂ ಶುಶ್ರೂಷೆ ನೀಡಲು ಮುಂದಿನ ಆರು ತಿಂಗಳು ಮಾನಸಿಕವಾಗಿ ಸಿದ್ಧರಾಗಿ ಎಂದು ಮನವಿ ಮಾಡಿರುವುದಾಗಿ ಹೇಳಿದ್ದಾರೆ.
ತಪಾಸಣಾ ಫಲಿತಾಂಶ ಪೋನ್‍ನಲ್ಲಿ ಅಲ್ಲ, ವೆಬ್‍ಸೈಟ್‍ನಲ್ಲಿ:
ಖಾಸಗಿ ಪ್ರಯೋಗಾಲಯ ಪರೀಕ್ಷಾ ಕೇಂದ್ರಗಳಲ್ಲಿ ನಡೆಸುವ ಕೋವಿಡ್ ತಪಾಸಣೆಯ ವರದಿಗಳನ್ನು ದೂರವಾಣಿಯ ಮೂಲಕ ರೋಗಿಗಳಿಗೆ ನೇರವಾಗಿ ತಿಳಿಸುತ್ತಿರುವುದರಿಂದ ರೋಗಿಗಳಲ್ಲಿ ಅನಗತ್ಯ ಆತಂಕ ಸೃಷ್ಠಿಯಾಗುತ್ತಿದೆ. ಅಲ್ಲದೆ, ರೋಗಿಗಳು ಆಸ್ಪತ್ರೆಗೆ ತೆರಳಲು ಮುಂದಾದಾಗ ಹಾಸಿಗೆಯ ಲಭ್ಯತೆ ಇಲ್ಲದ ಪ್ರಕರಣಗಳ ಬಗ್ಗೆಯೂ ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಗೊಂದಲಗಳನ್ನು ತಡೆಗಟ್ಟಲು ಕೋವಿಡ್ ತಪಾಸಣೆಯ ವರದಿಗಳನ್ನು ರೋಗಿಗಳಿಗೆ ನೇರವಾಗಿ ನೀಡುವುದನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ತಪಾಸಣಾ ವರದಿಯ ಮಾಹಿತಿಯನ್ನು ಯಾರಾದರೂ ನೇರವಾಗಿ ರೋಗಿಯೊಂದಿಗೆ ಹಂಚಿಕೊಂಡರೆ ಸರ್ಕಾರದ ನಿಯಮಗಳ ರೀತ್ಯಾ ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ಅಥವಾ ಖಾಸಗಿ ಪ್ರಯೋಗಾಲಯ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಿದ ಕೋವಿಡ್-19 ದೃಢಪಟ್ಟಲ್ಲಿ ಪರೀಕ್ಷಾ ಮಾಹಿತಿಯನ್ನು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಪೋರ್ಟಲ್‍ಗೆ ಅಪ್ ಲೋಡ್ ಮಾಡಬೇಕು. ಈ ಮಾಹಿತಿಯ ಆಧಾರದ ಮೇಲೆ ಪಾಲಿಕೆಯ ಆರೋಗ್ಯ ಅಧಿಕಾರಿಗಳು ರೋಗಿಗಳ ಗುಣಲಕ್ಷಣಗಳನ್ನು ಆಧರಿಸಿ ರೋಗಿಯನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಬೇಕೋ ಅಥವಾ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಬೇಕೋ ಎಂಬುದನ್ನು ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಡ್ ಮಟ್ಟದಲ್ಲಿ ಆರೋಗ್ಯ ಅಧಿಕಾರಿಗಳು ಕೋವಿಡ್ ಲಕ್ಷಣಗಳನ್ನು ಹೊಂದಿರುವವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ರೋಗಿಯನ್ನು ಭೇಟಿ ಮಾಡಿ ಆತನ ಗುಣ ಲಕ್ಷಣಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ನಂತರ ಕೋವಿಡ್ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೋವಿಡ್ ಆಸ್ಪತ್ರಗೆ ಇಲ್ಲವಾದಲ್ಲಿ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸುತ್ತಾರೆ.
ಎಲ್ಲಾ ಕೋವಿಡ್ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ನೇಮಕ
ರೋಗ ಲಕ್ಷಣಗಳು ಇರುವ ಕೋವಿಡ್ ರೋಗಿಗಳನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಲು ಹಾಗೂ ರೋಗ ಲಕ್ಷಣಗಳು ಇಲ್ಲದ ಕೋವಿಡ್ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಕಳುಹಿಸಲು ಸಂಯಮದಿಂದ ಮಾತನಾಡುವ ಧೈರ್ಯ ಹೇಳುವವರು ಅಗತ್ಯ. ಆದಕಾರಣ, ಎಲ್ಲಾ ಕೋವಿಡ್ ಆಸ್ಪತ್ರೆಗಳಿಗೆ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ನೇಮಕ ಮಾಡಲು ಕ್ರಮ ವಹಿಸಲಾಗಿದೆ. ಈವರೆಗೂ ಸ್ವಾಗತಕಾರರಂತೆ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿದ್ದ ವೈದ್ಯರ ಸೇವೆಯನ್ನು ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು ಎಂದು ತಿಳಿಸಿದ್ದಾರೆ.
ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್ – 19 ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುತ್ತಿರುವ ದೂರುಗಳೂ ಕೇಳಿ ಬಂದಿವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಈ ಬಗ್ಗೆ ಈಗಾಗಲೇ ಸರ್ಕಾರವು ಸುತ್ತೋಲೆಯನ್ನೂ ಕೂಡಾ ಹೊರಡಿಸಿದೆ.
ಗುರುತು ಪತ್ತೆಗೆ ಸ್ಟಿಕರ್:
ಕೋವಿಡ್ ಆಸ್ಪತ್ರೆಗಳಲ್ಲಿ ವೈದ್ಯರು ವೈದ್ಯಕೀಯೇತರ ಸಿಬ್ಬಂದಿ ಎಲ್ಲರೂ ವೈಯುಕ್ತಿಕ ರಕ್ಷಣಾ ಉಪಕರಣ(ಪಿಪಿಇ) ಕಿಟ್ ಧರಿಸುವ ಹಿನ್ನೆಲೆಯಲ್ಲಿ ಯಾರು ವೈದ್ಯರು ಯಾರು ವೈದ್ಯಕೀಯೇತರ ಸಿಬ್ಬಂದಿ ಎಂಬುದು ತಿಳಿಯುತ್ತಿಲ್ಲ. ಕೆಲವೊಮ್ಮೆ ವೈದ್ಯರು ಇಲ್ಲ ಎಂದೂ ಹಾಗೂ ಮತ್ತೆ ಕೆಲವೊಮ್ಮೆ ಅರೆ ವೈದ್ಯಕೀಯ ಸಿಬ್ಬಂದಿ ಬಂದಿಲ್ಲ ಎಂದೂ ದೂರುಗಳು ಕೇಳಿ ಬರುತ್ತಿವೆ. ಇದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯ ಗುರುತನ್ನು ಸುಲಭವಾಗಿ ಪತ್ತೆ ಹಚ್ಚಲು ಪಿಪಿಪಿ ಕಿಟ್ ಮೇಲೆ ಸ್ಟಿಕರ್ ಹಾಕಿಕೊಂಡು ಓಡಾಡಲು ಸೂಚನೆ ನೀಡಲಾಗಿದೆ, ಇನ್ನು ಮುಂದೆ ಎಲ್ಲಾ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಣಾ ವಹಿ(ಡ್ಯೂಟಿ ರಿಜಿಸ್ಟರ್) ಇರಿಸಿ ದಾಖಲಿಸಲು ಹಾಗೂ ವೀಡಿಯೋ ಮಾಡುವಂತೆ ಸೂಚಿಸಲಾಗಿದೆ. ಆದರೆ, ವೀಡಿಯೋವನ್ನು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬಾರದು ಅಥವಾ ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬಾರದು. ಇದನ್ನು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೇ ನಿರ್ವಹಿಸಬೇಕು.
ದೂರುಗಳು ಬಂದಾಗ ಇಲ್ಲವೇ, ತುರ್ತು ಸಂದರ್ಭಗಳಲ್ಲಿ ಪರಿಶೀಲನೆ ಮಾಡಲಾಗುವುದು. ಯಾರಾದರೂ ವೈದ್ಯರೇ ಇರಲೀ ಅಥವಾ ವೈದ್ಯಕೀಯೇತರ ಸಿಬ್ಬಂದಿಯೇ ಇರಲಿ ಚಿಕಿತ್ಸೆ ನೀಡಲು ನಿರಾಕರಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಕೋವಿಡ್ ರೋಗಿಗಳನ್ನು ದಾಖಲು ಮಾಡಲಾಗುವ ಎಲ್ಲಾ ಹಾಸಿಗೆಗಳಿಗೂ ಪ್ರತ್ಯೇಕ ಸಂಖ್ಯೆ ನೀಡಲಾಗುವುದು. ಇದರಿಂದ ಎಷ್ಟು ಜನ ರೋಗಿಗಳಿದ್ದಾರೆ ? ಎಷ್ಟು ರೋಗಿಗಳು ಬಿಡುಗಡೆ ಹೊಂದಿದ್ದಾರೆ? ಎಷ್ಟು ಹಾಸಿಗೆಗಳು ಲಭ್ಯವಿದೆ? ಎಂಬ ಬಗ್ಗೆ ಮಾಹಿತಿ ದೊರೆಯುತ್ತದೆ. ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎಲ್ಲಾ ಹಾಸಿಗೆಗಳಿಗೂ ಈಗಾಗಲೇ ಸಂಖ್ಯೆಗಳನ್ನು(ನಂಬರ್‍ಗಳನ್ನು) ನೀಡಲಾಗಿದೆ ಎಂದು ವಿವರಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ವೈದ್ಯಕೀಯೇತರ ಸಿಬ್ಬಂದಿಯನ್ನು ಕ್ವಾರೆಂಟೈನ್ ಮಾಡಲು ಹೋಟಲ್‍ಗಳನ್ನು ಗುರುತಿಸಲಾಗಿದೆ. ಅದರಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗುವುದು. ಇದರಿಂದ ಸಾರ್ವಜನಿಕರಿಂದ, ವಿಶೇಷವಾಗಿ, ನೆರೆಹೊರೆಯವರಿಂದ ಆಗುವ ಮುಜುಗರ ಹಾಗೂ ಮಾನಸಿಕ ವೇದನೆಯನ್ನು ತಪ್ಪಿಸಬಹುದಾಗಿದೆ. ಈ ಬಗ್ಗೆಯೂ ಕೂಡಾ ಕ್ರಮ ವಹಿಸಲಾಗಿದೆ.