
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಸಮುದಾಯಕ್ಕೆ ಹರಡಿರುವ ಅನುಮಾನ ವ್ಯಕ್ತವಾಗಿದೆ.
ಜನಸಂದಣಿ, ಮಾರುಕಟ್ಟೆ ಪ್ರದೇಶಗಳು ಸೋಂಕು ಹರಡುವ ತಾಣಗಳಾಗಿವೆ. ಇನ್ನು ಎರಡು ತಿಂಗಳು ನಿರ್ಣಾಯಕ ದಿನಗಳಾಗಿವೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಹೇಳಿದ್ದಾರೆ.
ಲಾಕ್ ಡೌನ್ ಸಡಿಲಿಕೆ ಮಾಡಿದ ನಂತರ ಬೆಂಗಳೂರಿನಲ್ಲಿ ಸೋಂಕು ತೀವ್ರವಾಗಿ ಏರಿಕೆಯಾಗುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಸೋಂಕು ತಗುಲಿರುವುದು ಹೇಗೆ ಎನ್ನುವುದೇ ಗೊತ್ತಾಗುತ್ತಿಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣ ಕಾಣಿಸುತ್ತಿಲ್ಲ. ಇನ್ನು ಎರಡು ತಿಂಗಳು ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪರಸ್ಪರ ಅಂತರ ಕಾಯ್ದುಕೊಳ್ಳದೆ ಮುಂಜಾಗ್ರತೆ ಕ್ರಮ ಪಾಲಿಸದೆ ಇರುವ ಕಾರಣ ಇಂತಹ ಪರಿಸ್ಥಿತಿ ಎದುರಾಗಿದೆ. ರ್ಯಾಂಡಮ್ ಪರೀಕ್ಷೆಗಳನ್ನು ನಡೆಸಿದರೆ ಹೆಚ್ಚಿನ ಮಾಹಿತಿ ಗೊತ್ತಾಗುತ್ತದೆ. ಕ್ವಾರಂಟೈನ್ ನಲ್ಲಿ ಇದ್ದವರು ಹೊರಗೆ ಬೇಕಾಬಿಟ್ಟಿಯಾಗಿ ಅಡ್ಡಾಡಿದರೂ, ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎಂದು ಹೇಳಲಾಗಿದೆ.