ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಲಾಕ್ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಂದಿನ 15 ದಿನಗಳು ನಿರ್ಣಾಯಕ ದಿನಗಳಾಗಿರುವುದರಿಂದ ಸೋಂಕು ತಡೆಯುವ ನಿಟ್ಟಿನಲ್ಲಿ ಸೀಮಿತ ಸ್ಥಳಗಳನ್ನು ಲಾಕ್ಡೌನ್ ಮಾಡುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೊರೊನಾ ಸೋಂಕು ಪ್ರಕರಣ ವ್ಯಾಪಕವಾಗಿ ಹರಡಿರುವ ಪ್ರದೇಶಗಳಲ್ಲಿ ಲಾಕ್ ಡೌನ್ ಮಾಡಲಾಗುವುದು. ಇದರೊಂದಿಗೆ ಅಂತರರಾಜ್ಯ ಪ್ರಯಾಣಕ್ಕೆ ಬ್ರೇಕ್ ಸೇರಿ ಹಲವು ನಿರ್ಬಂಧ ಹೇರಲಾಗುವುದು ಎನ್ನಲಾಗಿದೆ.
ಆರ್ಥಿಕ ಚಟುವಟಿಕೆ ಪುನಾರಂಭವಾಗುತ್ತಿರುವ ಹೊತ್ತಲ್ಲಿ ಮತ್ತೆ ಲಾಕ್ ಡೌನ್ ಬೇಕೆ? ಬೇಡವೇ? ಎನ್ನುವ ಚರ್ಚೆ ನಡೆದಿದ್ದು, ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದ ನಂತರ ಪ್ರಕರಣ ಹೆಚ್ಚಿರುವ ಪ್ರದೇಶಗಳಲ್ಲಿ ಲಾಕ್ಡೌನ್ ಜಾರಿಯಾಗುವ ಸಾಧ್ಯತೆಯಿದೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.