ಬೆಂಗಳೂರು: ಚಿಕಿತ್ಸೆಗೆ ಬರುವ ರೋಗಿಗಳನ್ನು ದಾಖಲಿಸಿಕೊಳ್ಳದೇ ವಾಪಸ್ ಕಳುಹಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಸೋಂಕಿತರ ಹೊರತಾಗಿ ಬೇರೆ ಕಾಯಿಲೆಯಿಂದ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು. ವಾಪಸ್ ಕಳುಹಿಸಿದಲ್ಲಿ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಆಯುಕ್ತರಿಗೆ ಈ ಕುರಿತಾಗಿ ಸುತ್ತೋಲೆ ಹೊರಡಿಸಲು ಸೂಚನೆ ನೀಡಲಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡದ, ದಾಖಲಿಸಿಕೊಳ್ಳದ ಖಾಸಗಿ ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಿ ಶಿಕ್ಷೆ ನೀಡುವ ಕುರಿತಾಗಿ ಸುತ್ತೋಲೆಯಲ್ಲಿ ಪ್ರಕಟಿಸುವಂತೆ ತಿಳಿಸಿದ್ದಾರೆ.