ಕೋವಿಡ್ ಹಗರಣದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 5 ಪ್ರಶ್ನೆ ಮುಂದಿಟ್ಟಿದ್ದಾರೆ.
ಕೊರೊನಾ ವೈರಸ್ ನಿಂದ ಜನ ಸಂಕಷ್ಟದಲ್ಲಿದ್ದು ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಭ್ರಷ್ಟಾಚಾರದಂತಹ ಗಂಭೀರ ಆರೋಪ ಕೇಳಿಬಂದಿದ್ದು ರಾಜ್ಯದ ದುರ್ದೈವವಾಗಿದೆ. ಆಡಳಿತ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿರುವ ಕಾಂಗ್ರೆಸ್ ಪಕ್ಷ ಹಗರಣದ ಬಗ್ಗೆ ಇದುವರೆಗೆ ಯಾವುದೇ ತನಿಖಾ ಸಂಸ್ಥೆಗೆ ದೂರು ನೀಡದೆ ಪ್ರಚಾರಕ್ಕೆ ಸೀಮಿತವಾಗಿದೆ. ದೊಡ್ಡಮಟ್ಟದ ಆರೋಪ ಹೊತ್ತಿರುವ ಆಡಳಿತ ಪಕ್ಷ ತನಿಖೆಯಿಂದ ಮುಕ್ತಿ ಪಡೆಯುವ ಯಾವ ಕ್ರಮಕ್ಕೆ ಮುಂದಾಗದೆ ಹಗರಣ ನಡೆದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.
ಜನರನ್ನು ರಕ್ಷಿಸಬೇಕಾದವರೇ ಕೆಸರೆರಚಾಟದ ಮೂಲಕ ಜನರ ಜೀವದ ಜೊತೆಗೆ ಚೆಲ್ಲಾಟ ಆಡುತ್ತಿರುವುದು ಎರಡು ಪಕ್ಷಗಳ ಅತ್ಯಂತ ಕ್ರೂರ ನಡವಳಿಕೆಯಾಗಿದೆ ಎಂದು ದೂರಿದ್ದಾರೆ.
ಎಲ್ಲಾ ದಾಖಲೆ ಪತ್ರಗಳು ಇದ್ದರೂ ಕಾಂಗ್ರೆಸ್ ನಾಯಕರು ಏಕೆ ಇದುವರೆಗೆ ಯಾರ ವಿರುದ್ಧವೂ ದೂರು ದಾಖಲಿಸಿಲ್ಲ…? ಲೆಕ್ಕಕೊಡಿ, ಉತ್ತರ ಕೊಡಿ ಎಂದು ಹೇಳುತ್ತಿರುವ ಕಾಂಗ್ರೆಸ್ ನಾಯಕರು ಹಗರಣವನ್ನು ಕಾನೂನಾತ್ಮಕ ಹೋರಾಟದ ದಿಕ್ಕಿಗೆ ಕೊಂಡೊಯ್ಯುವ ಯಾವುದಾದರೂ ನಿಶ್ಚಿತ ನಿಖರವಾದ ಯೋಜನೆಯನ್ನು ಹೊಂದಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿದ್ದ ಲೋಕಾಯುಕ್ತ ಸಂಸ್ಥೆಯ ರಕ್ತ ಮಾಂಸವನ್ನು ಹೀರಿದ ಕಾಂಗ್ರೆಸ್ ಸರ್ಕಾರ ಎಸಿಬಿ ರಚಿಸಿದ್ದು, ಈ ಹಗರಣವನ್ನು ಎಸಿಬಿಗೆ ನೀಡಬಹುದಿತ್ತಲ್ಲ. ಎಸಿಬಿ ಮೇಲೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
2000 ಕೋಟಿ ರೂಪಾಯಿ ಮೊತ್ತದ ಆರೋಪ ಮಾಡಿದ್ದರೂ ಬಿಜೆಪಿ ತನಿಖೆ ಕಡೆಗೆ ಗಮನ ಹರಿಸುತ್ತಿಲ್ಲ ಏಕೆ…? ಹಗರಣದ ಬಗ್ಗೆ ಇದುವರೆಗೆ ಪ್ರತಿ ಹೇಳಿಕೆಗಳನ್ನು ನೀಡುತ್ತಿರುವ ಸರ್ಕಾರ ತನಿಖೆಗೆ ಹಿಂದೇಟು ಹಾಕುತ್ತಿರುವುದು ನೋಡಿದರೆ ಹಣ ಕದಿಯಲಾಗಿದೆ ಎಂದು ಅನಿಸದೇ…? ಆಪರೇಷನ್ ಕಮಲಕ್ಕೆ ಮಾಡಿದ ಸಾಲ ತೀರಿಸಲು ಈಗ ಹಗರಣ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.