ಬೆಂಗಳೂರು: ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಈಗಾಗಲೇ ಹಲವು ಕ್ರಮಕೈಗೊಂಡಿರುವ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ರಾಜ್ಯದಲ್ಲಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೆ ಕೊರೋನಾ ಸೋಂಕು ಪರೀಕ್ಷೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಈ ಕುರಿತು ಆದೇಶ ಹೊರಡಿಸಲಾಗಿದ್ದು, ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಒಳಗಾದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ಸೇರಿದಂತೆ ಲಕ್ಷಣವಿರುವ ವ್ಯಕ್ತಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.
ಉಸಿರಾಟ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವ ರೋಗಿಗಳು, ಕೊರೋನಾ ಚಿಕಿತ್ಸೆಯಲ್ಲಿ ತೊಡಗಿರುವ ಸಿಬ್ಬಂದಿ, ಆರೋಗ್ಯ ಸೇವಾ ಕ್ಷೇತ್ರದ ಕಾರ್ಯಕರ್ತರು, ಕಂಟೈನ್ ಮೆಂಟ್, ಬಫರ್ ವಲಯದಲ್ಲಿರುವ ವ್ಯಕ್ತಿಗಳು, ಆರೋಗ್ಯ ಸಿಬ್ಬಂದಿ ಗುರುತಿಸಲ್ಪಡುವ ಯಾವುದೇ ವ್ಯಕ್ತಿ ಅಥವಾ ಕೊರೋನಾ ಶಂಕಿತ ವ್ಯಕ್ತಿಗಳು ಸೇರಿದಂತೆ ಇತರೆ ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ತಗುಲುವ ಅಪಾಯ ಇರುತ್ತದೆ.
ಕೆಲವರು ಕೋವಿಡ್ ಪರೀಕ್ಷೆಗೆ ಒಳಗಾಗಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ವಯ ಯಾವ ವ್ಯಕ್ತಿಗಳು ಕೋವಿಡ್-19 ಪರೀಕ್ಷೆಗೆ ಒಳಪಡಲು ತಿಳಿಸಲಾಗಿದೆಯೋ ಅಂತಹ ವ್ಯಕ್ತಿಗಳು ಕಡ್ಡಾಯವಾಗಿ ಕೋವಿಡ್ -19 ಪರೀಕ್ಷೆಗೆ ಒಳಪಡುವುದು ಎಂದು ಆದೇಶ ಹೊರಡಿಸಲಾಗಿದೆ.