ಬೆಂಗಳೂರು: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನಲ್ಲಿ ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ.
50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರೂಪ್ ಎ, ಬಿ ಮತ್ತು ಸಿ ವೃಂದದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಮಾಹಿತಿ ಒದಗಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.
ಕೊರೋನಾ ನಿಯಂತ್ರಣ ಚಟುವಟಿಕೆಗಳಿಗಾಗಿ ಸಿಬ್ಬಂದಿ ಅವಶ್ಯಕತೆ ಇರುವುದರಿಂದ ಇಲಾಖೆಯ ಸಾರ್ವಜನಿಕ ವಲಯದ ಘಟಕದಲ್ಲಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಗರ, ಬೆಂಗಳೂರು ನಗರ ಜಿಲ್ಲೆ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ವಾಸವಾಗಿರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರೂಪ್ ಎ, ಬಿ ಮತ್ತು ಸಿ ವೃಂದದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮಾಹಿತಿಯನ್ನು ಎರಡು ದಿನದೊಳಗೆ ಸಲ್ಲಿಸಲು ತಿಳಿಸಲಾಗಿದೆ.
ಪ್ರತಿ ಇಲಾಖೆ ಮತ್ತು ಸಂಸ್ಥೆಯಲ್ಲಿ ಶೇಕಡ 25 ರಿಂದ 50 ಕ್ಕಿಂತ ಹೆಚ್ಚದಂತೆ ಸಿಬ್ಬಂದಿಯನ್ನು ಅಗತ್ಯ ಕೆಲಸಗಳಿಗೆ ಉಳಿಸಿಕೊಳ್ಳಬಹುದು. ಉಳಿದಂತೆ ಎಲ್ಲಾ ಅಧಿಕಾರಿಗಳ ಪಟ್ಟಿಯನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಪೂರ್ಣ ಸಮಯದ ಆಧಾರದ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯ ಆದೇಶದಲ್ಲಿ ಅಡಿಯಲ್ಲಿ ಕೆಲಸ ನಿರ್ವಹಿಸುವ ಅಗತ್ಯವಿದೆ. ಯಾವುದೇ ವಿನಾಯಿತಿ ಜುಲೈ 10 ರ ಸಂಜೆ 5 ಗಂಟೆಯೊಳಗೆ ಸಿಬ್ಬಂದಿಯ ಮಾಹಿತಿಯನ್ನು ಬಿಬಿಎಂಪಿ ಆಯುಕ್ತರಿಗೆ ಇಮೇಲ್ ಮೂಲಕ ತಲುಪಿಸುವಂತೆ ಸೂಚನೆ ನೀಡಲಾಗಿದೆ.