ಬೆಂಗಳೂರು: ಕೊರೊನಾ ವೈರಸ್ ದೇಹದ ಅಂಗಾಂಗಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿ ಉಂಟು ಮಾಡಲಿದೆ ಎನ್ನುವುದು ಗೊತ್ತಾಗಿದೆ.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಘಾತಕಾರಿ ಮಾಹಿತಿ ಪತ್ತೆಯಾಗಿದೆ. ಮೃತ ವ್ಯಕ್ತಿಯಲ್ಲಿ 18 ಗಂಟೆ ಕೊರೋನಾ ವೈರಸ್ ಸಕ್ರಿಯವಾಗಿರುತ್ತದೆ. ಅಲ್ಲದೆ ಸಾಮಾನ್ಯ ವ್ಯಕ್ತಿಯ ಶ್ವಾಸಕೋಶ ಮೃದುವಾಗಿರುತ್ತದೆ. ಕೋರೋನಾದಿಂದ ಮೃತಪಟ್ಟ ವ್ಯಕ್ತಿಯ ಶ್ವಾಸಕೋಶ ಕಾರ್ಕ್ ಬಾಲ್ ನಂತೆ ಗಟ್ಟಿಯಾಗಿತ್ತದೆ.
ವಿಧಿ ವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಈ ಆಘಾತಕಾರಿ ಮಾಹಿತಿ ಗೊತ್ತಾಗಿದೆ. ಕೋವಿಡ್ ನಿಂದ ಮೃತಪಟ್ಟಿದ್ದ 62 ವರ್ಷದ ವ್ಯಕ್ತಿಯೊಬ್ಬರ ಕುಟುಂಬ ಸದಸ್ಯರ ಸಮ್ಮತಿ ಪಡೆದ ದಿನೇಶ್ ರಾವ್ ಆಕ್ಸ್ ಫರ್ಡ್ ಮೆಡಿಕಲ್ ಕಾಲೇಜಿನ ಪ್ರಯೋಗಾಲಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಇತ್ತೀಚೆಗೆ ಈ ಪರೀಕ್ಷೆ ನಡೆದಿದ್ದು ವರದಿ ಈಗ ಬಂದಿದೆ. ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಗಂಟಲು, ಮೂಗು, ಶ್ವಾಸನಾಳ, ಚರ್ಮದ ಮೇಲಿನ ಮಾದರಿಗಳನ್ನು 18 ಗಂಟೆಗಳ ನಂತರ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಮೂಗಿನ ದ್ರವ, ಗಂಟಲು ದ್ರವದ ಮಾದರಿಗಳಲ್ಲಿ ವೈರಸ್ ಕಂಡುಬಂದಿವೆ.
ಮೃದುವಾಗಿರುವ ಶ್ವಾಸಕೋಶ ಕಾರ್ಕ್ ಬಾಲ್ ರೀತಿ ಗಟ್ಟಿ ಆಗಿತ್ತು. ಶ್ವಾಸಕೋಶದ ಗಾಳಿ ಚೀಲಕ್ಕೆ ಹಾನಿಯಾಗಿದ್ದು ರಕ್ತನಾಳದಲ್ಲಿ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಹೃದಯಕ್ಕೆ ಕೂಡ ಹಾನಿಯಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಅಂಗಾಂಗಗಳಲ್ಲಿ ರಕ್ತಸ್ರಾವದ ಜೊತೆಗೆ ಊತವಾಗಿದೆ ಎಂದು ಹೆಸರಾಂತ ವಿಧಿವಿಜ್ಞಾನ ತಜ್ಞರಾದ ಡಾ. ದಿನೇಶ್ ರಾವ್ ತಿಳಿಸಿದ್ದಾರೆ.