ಬೆಂಗಳೂರು: ಕೊರೊನಾ ಕರ್ತವ್ಯಕ್ಕೆ ನಿಯೋಜಿತರಾದ ಸರ್ಕಾರಿ ಅಧಿಕಾರಿಗಳು ಅಥವಾ ನೌಕರರು ಮೃತಪಟ್ಟರೆ ವಿಮೆ ಪರಿಹಾರ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ಕೊರೋನಾ ಕೆಲಸಕ್ಕೆ ನಿಯೋಜಿತರಾದ ಇತರೆ ಇಲಾಖೆಗಳ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅವಶ್ಯಕವಾಗಿ ಪರಿಹಾರ ಮತ್ತು ವಿಮೆ ಮೊತ್ತವನ್ನು ನೀಡಲು ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸಿಎಂ ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮುಖ್ಯಮಂತ್ರಿಯವರಿಗೆ ಈ ಕುರಿತಾಗಿ ಮನವಿ ಸಲ್ಲಿಸಿದ್ದು ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಿಎಂ, ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮುಂದಿನ ಕ್ರಮ ವಹಿಸಲು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಪೊಲೀಸ್, ಆರೋಗ್ಯ, ನಗರಾಭಿವೃದ್ಧಿ ಇಲಾಖೆಗಳ ಕೊರೊನಾ ವಾರಿಯರ್ ಗಳಿಗೆ ವಿಮೆ ಪರಿಹಾರ ನೀಡಲಾಗುತ್ತಿದೆ. ಅದೇ ರೀತಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು ಕೊರೊನಾ ಕೆಲಸ ಮಾಡುತ್ತಿದ್ದು ಅವರು ಮೃತಪಟ್ಟ ಸಂದರ್ಭದಲ್ಲಿ ವಿಮೆ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿತ್ತು. ಇದಕ್ಕೆ ಸಿಎಂ ಸ್ಪಂದಿಸಿದ್ದಾರೆ ಎಂದು ಹೇಳಲಾಗಿದೆ.