
ಬೆಂಗಳೂರು: ರಾಜ್ಯದಲ್ಲಿ ಕಳೆದ 2 ವಾರಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೋವಿಡ್ ಲಕ್ಷಣ ಇಲ್ಲದಿರುವ ಸೋಂಕಿತರಿಗಾಗಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುತ್ತಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತರೆ ರಾಜ್ಯಗಳಲ್ಲಿ ಯಶಸ್ವಿಯಾಗಿ ಅನುಸರಿಸುತ್ತಿರುವ ಕ್ರಮಗಳ ಕುರಿತಂತೆ ಪರಿಣಿತರ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ಕೆಲವು ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಖಾಸಗಿ ವಲಯದ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡು ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕೊರೊನಾ ಚಿಕಿತ್ಸೆಯ ವ್ಯವಸ್ಥೆ ಇರುವಂತಹ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಯಾವ ಆಸ್ಪತ್ರೆಗಳು ಎಷ್ಟು ಹಾಸಿಗೆಗಳು, ಎಷ್ಟು ಐಸಿಯು ಮತ್ತು ವೆಂಟಿಲೇಟರ್ ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಬೇಕು ಎನ್ನುವುದಕ್ಕೆ ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಲಾಗಿದೆ. ಪ್ರತಿದಿನ ಕನಿಷ್ಠ 15,000 ದಿಂದ 25,000 ಕೋವಿಡ್ ಟೆಸ್ಟ್ ನಡೆಸುವ ನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಹೆಚ್ಚಿನದಾಗಿ ಜನಸಂದಣಿ ಇರುವ ಜಾಗಗಳಲ್ಲಿ ಇರುವ ಜನರು, ಪೌರಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಪೋಲೀಸರು, ಆರೋಗ್ಯ ಕಾರ್ಯಕರ್ತರು ಮುಂತಾದ ಹೆಚ್ಚು ಜನಸಂಪರ್ಕ ಹೊಂದುತ್ತಿರುವ ಜನರನ್ನು ಹೆಚ್ಚಿಗೆ ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಎಲ್ಲಾ ರೀತಿಯ ILI ಹಾಗೂ SARI ಲಕ್ಷಣಗಳಿರುವವರನ್ನು ಕಡ್ಡಾಯ ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ. ರೋಗ ಲಕ್ಷಣವಿರದ ಸೋಂಕಿತರನ್ನು ಪ್ರತ್ಯೇಕಿಸಿ ನಿಗಾ ವಹಿಸಲು ಅನುವಾಗುವಂತೆ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಯಾರಿಗೆ ರೋಗ ಲಕ್ಷಣ ಎಷ್ಟಿದೆ, ಎಂತಹ ಚಿಕಿತ್ಸೆ ಅಗತ್ಯವಿದೆ, ಯಾವ ಆಸ್ಪತ್ರೆಯಲ್ಲಿ ದಾಖಲಿಸಬೇಕು ಮುಂತಾದವುಗಳನ್ನು ಕಂಡುಹಿಡಿಯಲು ತಜ್ಞರ ಸಮಿತಿ ರಚಿಸಿರುವುದಾಗಿ ತಿಳಿಸಿದ್ದಾರೆ.
ಸಿಸಿಸಿ ಕೇಂದ್ರಗಳಲ್ಲಿ ಬೆಂಗಳೂರು ನಗರದಲ್ಲಿ ಕನಿಷ್ಠ 20,000 ಹಾಸಿಗೆ ಇರುವಂತೆ ವ್ಯವಸ್ಥೆ ಮಾಡಲು ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ. ರೋಗ ಲಕ್ಷಣ ಇಲ್ಲದಿರುವವರಿಗೆ ಆಸ್ಪತ್ರೆಗಳಲ್ಲಿ ಭರ್ತಿ ಮಾಡಿಕೊಂಡರೆ ರೋಗ ಲಕ್ಷಣವಿರುವವರಿಗೆ ಚಿಕಿತ್ಸೆಗೆ ತೊಂದರೆ ಆಗಬಹುದು. ಆದ್ದರಿಂದ ಅಗತ್ಯವಿರುವವರಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಈ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಸಿಎಂ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಜವಾಬ್ದಾರಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸೋಂಕು ಹೆಚ್ಚು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅತ್ಯಂತ ಸಮರ್ಥವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ಅಗತ್ಯ ಬಿದ್ದಲ್ಲಿ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಪರಿಸ್ಥಿತಿಯನ್ನು ಸುಧಾರಿಸಲು ತಮ್ಮ ಸರ್ಕಾರ ಬದ್ಧವಾಗಿದೆ. ಶೀಘ್ರದಲ್ಲೇ ಇನ್ನಷ್ಟು ಲ್ಯಾಬ್ಗಳನ್ನು ಸ್ಥಾಪಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಟೆಸ್ಟ್ ನಡೆಸಲಾಗುವುದೆಂದು ಹೇಳಿದ್ದಾರೆ.