ಬೆಂಗಳೂರು: ರೋಗಿಗಳ ದಾಖಲಾತಿ, ಗುಣಮಟ್ಟದ ಆಹಾರ ಮತ್ತು ಸ್ವಚ್ಛತೆಯಲ್ಲಿ ದೂರುಗಳಿಲ್ಲದಂತೆ ಕಾರ್ಯ ನಿರ್ವಹಿಸಲು ಸೂಚನೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಲೋಪಗಳಾದರೆ, ದೂರು ಬಂದಲ್ಲಿ ನಿರ್ದೇಶಕರುಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಿರಿಯ ಅಧಿಕಾರಿಗಳು ಮತ್ತು ಕೋವಿಡ್ ಆಸ್ಪತ್ರೆ ನಿರ್ದೇಶಕರ ಜತೆ ಕ್ವಾರಂಟೈನ್ ನಲ್ಲಿರುವ ಸಚಿವ ಸುಧಾಕರ್ ವಿಡಿಯೋ ಸಂವಾದ ನಡೆಸಿದ್ದು, ವಿಕ್ಟೋರಿಯಾ, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ಮತ್ತು ಬೌರಿಂಗ್ ಆಸ್ಪತ್ರೆ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇನ್ನೂ ದೂರು ಬಂದಲ್ಲಿ ಸಂಸ್ಥೆಗಳ ಆಡಳಿತ ನೋಡಿಕೊಳ್ಳಲು ಹಿರಿಯ ಕೆಎಎಸ್ ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದು, ತಜ್ಞರು, ಹಿರಿಯ ವೈದ್ಯರು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹೋಗುತ್ತಿಲ್ಲ ಎಂಬ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗಳಿಗೆ ಸ್ಥಳಾಂತರಿಸಲು ಸಚಿವರು ಸೂಚನೆ ನೀಡಿದ್ದು, ತಮ್ಮ ತಂದೆ, ಪತ್ನಿ ಮತ್ತು ಪುತ್ರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಣಮುಖರಾಗಲಿ ಎಂದು ಹಾರೈಸಿರುವ ಎಲ್ಲರಿಗೂ ತಾವು ಚಿರಋಣಿ ಎಂದು ತಿಳಿಸಿದ್ದಾರೆ.