ಏಪ್ರಿಲ್, ಮೇ, ಜೂನ್ ತಿಂಗಳು ಬಂತೆಂದರೆ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ. ಅದರಲ್ಲಿಯೂ ಕ್ರಿಕೆಟ್ ಬೆಟ್ಟಿಂಗ್ ಅಂತು ಜೋರಾಗಿ ನಡೆಯುತ್ತದೆ.
ಪ್ರತಿ ವರ್ಷ ನಡೆಯುತ್ತಿದ್ದ ಕ್ರಿಕೆಟ್ ಹಬ್ಬ ಐಪಿಎಲ್ ಈ ಬಾರಿ ಕೊರೋನಾ ಕಾರಣದಿಂದ ನಡೆಯುತ್ತಿಲ್ಲ. ಐಪಿಎಲ್ ನಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುತ್ತಿತ್ತು. ಈಗ ಕೊರೋನಾ ಸೋಂಕಿತರ ವಿಚಾರಕ್ಕೆ ಬೆಟ್ಟಿಂಗ್ ನಡೆಯುತ್ತಿದೆ.
ರಾಜ್ಯದ ಹಲವೆಡೆ ಕೊರೋನಾ ಬುಲೆಟಿನ್ ಸ್ಕೋರ್ ಕಾರ್ಡ್ ಆಗಿ ಬದಲಾಗಿದ್ದು, ಈ ಸಂಖ್ಯೆಗಳ ಆಧಾರದ ಮೇಲೆ ಬೆಟ್ಟಿಂಗ್ ದಂಧೆ ನಡೆಯುತ್ತಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಇಂದು ಎಷ್ಟು ಜನರಿಗೆ ಸೋಂಕು ತಗಲುತ್ತದೆ? ಬೆಂಗಳೂರು ನಗರ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಪಾಸಿಟಿವ್ ವರದಿ ಬರುತ್ತದೆ? ಸಾವಿನ ಸಂಖ್ಯೆ ಎಷ್ಟು? ಗುಣಮುಖರಾದವರ ಸಂಖ್ಯೆ, ಐಸಿಯುನಲ್ಲಿ ಎಷ್ಟು ಮಂದಿ ಇದ್ದಾರೆ? ಎಂಬ ಅಂಕಿ ಸಂಖ್ಯೆಗಳ ಮೇಲೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕೊರೋನಾ ಬೆಟ್ಟಿಂಗ್ ಹೆಚ್ಚಾಗಿದೆ ಎನ್ನಲಾಗಿದೆ.
ಕೊರೋನಾದಿಂದ ಊರು ಸೇರಿಕೊಂಡಿರುವ ಬಹುತೇಕರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬಾಜಿ ಕಟ್ಟತೊಡಗಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಕೊರೋನಾ ಸ್ಕೋರ್ ಮೇಲೆ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ ಎಂದು ಹೇಳಲಾಗಿದೆ.