ಬೆಂಗಳೂರು: ಗುತ್ತಿಗೆ ವೈದ್ಯರ ಸೇವೆಯನ್ನು ಕಾಯಂ ಮಾಡುವ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸುವುದಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಭರವಸೆ ನೀಡಿದ್ದಾರೆ.
ಗುತ್ತಿಗೆ ವೈದ್ಯರು ಸೇವೆ ಕಾಯಂಗೊಳಿಸುವಂತೆ ಮನವಿ ಮಾಡಿದ್ದು, ಸ್ಪಂದಿಸಿದ ಡಿಸಿಎಂ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಅವರೊಂದಿಗೆ ಮಾತುಕತೆ ನಡೆಸಿ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಲಾಗುವುದು. ಸಂಪುಟ ಕುರಿತಾಗಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರವಾಹ, ಬರಗಾಲ, ಕೊರೋನಾ ಸಮಯದಲ್ಲೂ ಹಿಂಜರಿಯದೆ ಜನರ ಸೇವೆ ಮಾಡಿದ್ದೇವೆ. ಹಿಂದಿನಿಂದಲೂ ಮೂರು ವರ್ಷ ಸೇವೆ ಮಾಡಿದ ಗುತ್ತಿಗೆ ವೈದ್ಯರನ್ನು ಕಾಯಂ ಮಾಡಲಾಗಿದೆ. ಕಾಯಂ ವೈದ್ಯರಷ್ಟೇ ಜವಾಬ್ದಾರಿಯುತವಾಗಿ ಕೆಲಸ ಮಾಡುವ ನಮ್ಮನ್ನು ಕಾಯಂಗೊಳಿಸಬೇಕು ಎಂದು ಗುತ್ತಿಗೆ ವೈದ್ಯರು ಮನವಿ ಮಾಡಿದ್ದು, ಇದಕ್ಕೆ ಡಿಸಿಎಂ ಭರವಸೆ ನೀಡಿದ್ದಾರೆ.