ಬೆಂಗಳೂರು: ರಾಜ್ಯ ವೈದ್ಯಕೀಯ, ದಂತವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜ್ ಗಳ ಒಕ್ಕೂಟದ ಕಾಮೆಡ್ -ಕೆ ಪರೀಕ್ಷೆ ನಿಗದಿಯಂತೆ ಆಗಸ್ಟ್ 19 ರಂದು ನಡೆಯಲಿದೆ.
ಕಾಮೆಡ್ –ಕೆ ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಪರೀಕ್ಷೆಯನ್ನು ನಡೆಸುವಂತೆ ಸೂಚಿಸಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆದಿದ್ದು ಪರೀಕ್ಷೆ ಮುಂದೂಡಿದರೆ ವಿದ್ಯಾರ್ಥಿಗಳಿಗೆ ನಷ್ಟವಾಗುತ್ತದೆ. ಈಗಾಗಲೇ ಸಿಇಟಿ ಪರೀಕ್ಷೆ ನಡೆದಿರುವುದರಿಂದ ನಿಗದಿಯಂತೆ ಕಾಮೆಡ್-ಕೆ ಪರೀಕ್ಷೆಯನ್ನು ನಡೆಸುವ ಅಗತ್ಯವಿದೆ ಎಂದು ತಿಳಿಸಲಾಗಿದೆ. ಮುಂಜಾಗ್ರತೆ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವಂತೆ ತಿಳಿಸಲಾಗಿದೆ.
ಕೊರೋನಾ ಕಾರಣದಿಂದ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಕಾಮೆಡ್-ಕೆ ಪರೀಕ್ಷೆ ಆಗಸ್ಟ್ 19 ರಂದು ಬೆಳಗ್ಗೆ 9 ರಿಂದ 12ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ ನಡೆಯಲಿದೆ. ಪರೀಕ್ಷೆಯ ನಿಯಮಗಳು ಮತ್ತು ಷರತ್ತುಗಳಲ್ಲಿ ಬದಲಾವಣೆ ಇರುವುದಿಲ್ಲ ಎಂದು ಹೇಳಲಾಗಿದೆ. studenthelpdesk@comedk.org ನಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.