ತೌಕ್ತೆ ಚಂಡಮಾರುತದಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್. ಅಶೋಕ್ 2 ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ನಿಮಿತ್ತ ಇಂದು ಉಡುಪಿಗೆ ಭೇಟಿ ನೀಡಿದ ಸಚಿವ ಆರ್. ಅಶೋಕ್ ರಾಜ್ಯದಲ್ಲಿ ಕೊರೊನಾ ಲಾಕ್ಡೌನ್ ವಿಸ್ತರಣೆ ವಿಚಾರವಾಗಿ ಮಹತ್ವದ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ ಆದೇಶ ಮುಂದುವರಿಸಬೇಕು ಅನ್ನೋದು ನನ್ನ ಅಭಿಪ್ರಾಯವಾಗಿದೆ. ಆದರೆ ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ತಾರೆ. ಮಹಾರಾಷ್ಟ್ರ, ದೆಹಲಿ ಹಾಗೂ ಕೇರಳಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಗ್ಗುತ್ತಿದೆ. ಇವನ್ನೆಲ್ಲ ನೋಡಿದಾಗ ಲಾಕ್ಡೌನ್ ಮುಂದುವರಿಕೆ ಹೆಚ್ಚು ಸೂಕ್ತ ಎನಿಸುತ್ತೆ ಎಂದು ಹೇಳಿದ್ರು.
ಅಲ್ಲದೇ ಹಳ್ಳಿಗಳಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರೋದ್ರ ಬಗ್ಗೆಯೂ ಮಾತನಾಡಿದ ಅವ್ರು, ಜನರು ನಗರ ಪ್ರದೇಶಗಳನ್ನ ಬಿಟ್ಟು ಹಳ್ಳಿಗಳತ್ತ ಮುಖ ಮಾಡ್ತಿದ್ದಾರೆ. ಇದರಿಂದಾಗಿ ಹಳ್ಳಿಗಳಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಹಳ್ಳಿಯ ಕಡೆ ವೈದ್ಯರು ಹೋಗಬೇಕು. ಹಳ್ಳಿಗೆ ವೈದ್ಯಾಧಿಕಾರಿಗಳನ್ನ ಕಳುಹಿಸುವ ಯೋಜನೆಗೆ ಚಾಲನೆ ನೀಡಿದ್ದೇನೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಪೈಲಟ್ ಪ್ರಾಜೆಕ್ಟ್ಗೆ ಚಾಲನೆ ದೊರತಿದೆ.
ಪಿಜಿ ಹಾಗೂ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳನ್ನ ಸೇವೆಗೆ ಬಳಸಿಕೊಳ್ಳುತ್ತವೆ. ಒಂದು ತಿಂಗಳಿಗೆ ಆಗುವಷ್ಟು ಪಿಪಿಇ ಕಿಟ್, ಸ್ಯಾನಿಟೈಸರ್ ಸೇರಿದಂತೆ ಎಲ್ಲಾ ಪರಿಕರಗಳನ್ನ ನೀಡುತ್ತೇವೆ. ಇವರು ಹಳ್ಳಿ ಪ್ರದೇಶಗಳಲ್ಲಿ ವಾರಕ್ಕೆ ಮೂರು ಸಲ ಭೇಟಿ ನೀಡಬೇಕು. ಈ ಕುರಿತು ಶೀಘ್ರದಲ್ಲೇ ರಾಜ್ಯಾದ್ಯಂತ ಆದೇಶ ಬರಲಿದೆ ಎಂದು ಹೇಳಿದ್ರು.