ಬೆಂಗಳೂರು: ಬೆಂಗಳೂರಿನಲ್ಲಿ ಕೊರೋನಾ ಸ್ಪೋಟವಾಗಿದ್ದು, ರಾಜ್ಯದ ಹಲವೆಡೆಯೂ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಟಾಸ್ಕ್ ಫೋರ್ಸ್ ಸಭೆ ನಡೆದಿದೆ.
ಬೆಂಗಳೂರು ದಕ್ಷಿಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕಿತರು ಇರುವುದರಿಂದ ಇಂತಹ ಸ್ಥಳಗಳಲ್ಲಿ ಕಟ್ಟುನಿಟ್ಟಾಗಿ ಸೀಲ್ ಡೌನ್ ಜಾರಿ ಮಾಡಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ.
ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಠಿಣ ಸೀಲ್ ಡೌನ್ ಮಾಡಬೇಕು. ಸೋಂಕು ಹೆಚ್ಚಿರುವ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಟ್ ಕೈಗೊಳ್ಳಬೇಕು. ಅದೇ ರೀತಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದಾರೆ
ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ. ಸುಧಾಕರ್ ಈ ಕುರಿತು ಮಾತನಾಡಿ, ಸೀಲ್ ಡೌನ್ ಬಿಗಿಗೊಳಿಸಲು ಸಿಎಂ ಸೂಚನೆ ನೀಡಿದ್ದಾರೆ. ಕೋವಿಡ್ ಕೇರ್ ಸೆಂಟರ್ ಗಳನ್ನು ಹೆಚ್ಚಳ ಮಾಡಲು ಸೂಚಿಸಿದ್ದಾರೆ. ಸಭೆಯಲ್ಲಿ ಲಾಕ್ಡೌನ್ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.
ಲಾಕ್ಡೌನ್ ಪರಿಹಾರ ಅಲ್ಲವೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು ಹೀಗಾಗಿ ಮತ್ತೊಮ್ಮೆ ಲಾಕ್ಡೌನ್ ಮಾಡುವುದಿಲ್ಲ. ಭಾನುವಾರ ಮಾತ್ರ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಮುಂದಿನ ಆದೇಶದವರೆಗೆ ಭಾನುವಾರ ಮಾತ್ರ ಲಾಕ್ಡೌನ್ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.