ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ವಿರೋಧಪಕ್ಷಗಳು ಹಲವು ಅಸ್ತ್ರಗಳೊಂದಿಗೆ ಸರ್ಕಾರದ ಚಳಿ ಬಿಡಿಸಲು ಸನ್ನದ್ಧವಾಗಿವೆ. ವಿರೋಧ ಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪೂರ್ವ ತಯಾರಿ ನಡೆಸಿದ್ದಾರೆ. ಸಂಪುಟ ಸಹೋದ್ಯೋಗಿಗಳೊಂದಿಗೆ ಇವತ್ತು ಸಂಜೆ ಸಿಎಂ ವಿಶೇಷ ಸಭೆ ನಡೆಸಲಿದ್ದಾರೆ.
ಸೆಪ್ಟೆಂಬರ್ 21 ರ ಸೋಮವಾರದಿಂದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಲಿದೆ. ಅಧಿವೇಶನದಲ್ಲಿ ಮಹತ್ವದ ಸುಗ್ರಿವಾಜ್ಞೆಗಳಿಗೆ ಸರ್ಕಾರದ ಒಪ್ಪಿಗೆ ಪಡೆಯಬೇಕಿದೆ. ಈ ನಡುವೆ ಡಿಜೆ ಹಳ್ಳಿ ಗಲಭೆ ಪ್ರಕರಣ, ಆರೋಗ್ಯ ಇಲಾಖೆಯಿಂದ ಕೋವಿಡ್ ಸಾಮಗ್ರಿ ಖರೀದಿ, ಜಿಎಸ್ಟಿ ಸಂಗ್ರಹ, ಭೂ ಸುಧಾರಣೆ ಕಾಯ್ದೆ ಮೊದಲಾದ ವಿಷಯಗಳ ಬಗ್ಗೆ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ.
ಇನ್ನು ಸಂಪುಟ ವಿಸ್ತರಣೆ ಕೂಡ ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ಸಿಎಂ ಸಂಪುಟ ಸಹೋದ್ಯೋಗಿಗಳೊಂದಿಗೆ ಇವತ್ತು ಸಮಾಲೋಚನೆ ನಡೆಸಲಿದ್ದಾರೆ. ವಿಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಲಾಗಿದೆ.