ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಇನ್ನೂ 4 ದಿನ ಮಳೆ ಹೆಚ್ಚಾಗಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರೆಯಲಿದೆ ಎನ್ನಲಾಗಿದೆ.
ನೈರುತ್ಯ ಮುಂಗಾರು ಮಾರುತಗಳು ಭಾರೀ ಪ್ರಬಲವಾಗಿದ್ದು ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಅದೇ ರೀತಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಜಿಲ್ಲಾಡಳಿತಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇನ್ನು ರಾಜ್ಯಾದ್ಯಂತ ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಮಳೆಯ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ತೆಗೆದುಕೊಳ್ಳುವುದು ಸೇರಿದಂತೆ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚನೆ ನೀಡಿದ್ದಾರೆ. ತುರ್ತು ಸಂದರ್ಭಕ್ಕಾಗಿ ಕೂಡಲೇ 50 ಕೋಟಿ ರೂ. ಬಿಡುಗಡೆಗೊಳಿಸುವಂತೆ ಸೂಚನೆ ನೀಡಿದ್ದು, ಕೆಲ ಜಿಲ್ಲಾಧಿಕಾರಿಗಳ ಜೊತೆ ಪೋನ್ ಮುಖಾಂತರ ಸಂಪರ್ಕ ಮಾಡಿ ಮಳೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.