ಬೆಂಗಳೂರು ಹೊರವಲಯದಲ್ಲಿ ಆರಂಭಿಸುತ್ತಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಸಿಎಂ ಯಡಿಯೂರಪ್ಪ ಇಂದು ಸಚಿವರು, ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದೆ. 10,100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಶೀಘ್ರ ಕಾರ್ಯಾರಂಭ ಮಾಡಲಿದೆ. ಕೇಂದ್ರದ ಅಧಿಕಾರಿಗಳ ತಂಡ ಸಹ ಈ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದೆ. ಈ ಕೇಂದ್ರದಲ್ಲಿ 2200 ಸಿಬ್ಬಂದಿ ನೇಮಕ ಮಾಡಲಾಗಿದೆ. 100 ರೋಗಿಗಳಿಗೆ ಒಬ್ಬ ವೈದ್ಯರು, ಇಬ್ಬರು ನರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನೊಂದು ವಾರದಲ್ಲಿ ಕೋವಿಡ್ ಕೇರ್ ಕಾರ್ಯಾರಂಭ ಮಾಡಲಿದೆ. ಖಾಸಗಿ ಆಸ್ಪತ್ರೆಗಳು ಬಡವರಿಂದ ಸುಲಿಗೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಇದು ಮತ್ತೆ ಮರುಕಳಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.