ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು ವೈದ್ಯಕೀಯ ಸೌಲಭ್ಯಗಳಿಗೆ ಅಭಾವ ಉಂಟಾಗುತ್ತಿದೆ. ಈ ಸಂಬಂಧ ಪರಿಶೀಲನೆ ನಡೆಸಲು ವಾರ್ ರೂಮ್ಗೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ ಸೋಂಕಿನಿಂದ ಗುಣಮುಖರಾದ ಬಳಿಕವೂ ಬೆಡ್ ಬಿಟ್ಟುಕೊಡದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವಾರ್ ರೂಮಿನಿಂದ ಹೊರ ಬಂದ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ ವಾರ್ ರೂಮ್ ಸಿಬ್ಬಂದಿ ಕಾರ್ಯವನ್ನ ಶ್ಲಾಘಿಸಿದರು. ಇದೇ ವೇಳೆ ಬೆಡ್ ಅಭಾವದ ಕುರಿತಂತೆ ಮಾತನಾಡಿದ ಅವರು, ಕೆಲ ಜನರು ಹುಷಾರಾದ ಬಳಿಕವೂ ಆಸ್ಪತ್ರೆಗಳಲ್ಲಿ ಬೆಡ್ ಬಿಟ್ಟುಕೊಡಲು ತಯಾರಿಲ್ಲ. ವಾರ್ ರೂಮಿನಲ್ಲಿ ಸಿಕ್ಕ ಮಾಹಿತಿಯ ಪ್ರಕಾರ 503 ಮಂದಿ ಸೋಂಕಿನಿಂದ ಗುಣಮುಖರಾದ ಬಳಿಕವೂ ಆಸ್ಪತ್ರೆಯಲ್ಲೇ ಇದ್ದಾರೆ. 20 ದಿನಗಳೇ ಕಳೆದ್ರೂ ಇವರೆಲ್ಲ ಡಿಸ್ಚಾರ್ಜ್ ಆಗುವ ಚಿಂತನೆಯಲ್ಲೇ ಇದ್ದಂತೆ ಕಾಣ್ತಿಲ್ಲ. ಚೇತರಿಸಿಕೊಂಡ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ. ನೀವು ಆ ರೀತಿ ಮಾಡೋದ್ರಿಂದ ಸೋಂಕಿತರಿಗೆ ಸಮಸ್ಯೆ ಆಗಲಿದೆ ಎಂದು ಹೇಳಿದ್ರು.
ರಾಜ್ಯದಲ್ಲಿ ಲಸಿಕೆ ಅಭಾವದ ವಿಚಾರವಾಗಿಯೂ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಲಸಿಕೆ ಅಭಿಯಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಲಸಿಕೆ ಬಂದ ತಕ್ಷಣ ಎಲ್ಲರಿಯೂ ನೀಡುತ್ತೇವೆ. ಸುಮ್ಮನೇ ಆಸ್ಪತ್ರೆ ಮುಂದೆ ಹೋಗಿ ಬೊಬ್ಬೆ ಹಾಕಬೇಡಿ ಎಂದು ಹೇಳಿದ್ರು.