ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಒಂದು ಬಾರಿ ಪಡೆಯಬಹುದಾದ ಗರಿಷ್ಠ ಸಾಂದರ್ಭಿಕ ರಜೆ ಮಿತಿಯನ್ನು ಕಡಿತ ಮಾಡಲಾಗಿದೆ.
ಸರ್ಕಾರದ ಆದೇಶದ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ 15 ದಿನಗಳ ಸಾಂದರ್ಭಿಕ ರಜೆ ಮಂಜೂರು ಮಾಡಲು ಆದೇಶಿಸಲಾಗಿತ್ತು. 15 ದಿನಗಳ ರಜೆಯನ್ನು 10 ದಿನಗಳಿಗೆ ಇಳಿಸಿ ಆದೇಶಿಸಲಾಗಿದೆ.
15 ದಿನಗಳ ಸಾಂದರ್ಭಿಕ ರಜೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಒಂದು ಬಾರಿಗೆ ಪಡೆಯಬಹುದಾದ ಗರಿಷ್ಠ ಸಾಂದರ್ಭಿಕ ರಜೆ ಮಿತಿಯನ್ನು 7 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಸಾರ್ವತ್ರಿಕ ರಜೆಯೊಂದಿಗೆ ಸಂಯೋಜಿಸಿದ ಸಂದರ್ಭದಲ್ಲಿ ಈ ಅವಧಿಯನ್ನು 10 ದಿನಗಳಿಗೆ ನಿರ್ಬಂಧಿಸಿ ಅವಕಾಶ ಕಲ್ಪಿಸಲಾಗಿತ್ತು.
ಈಗ ಸಾಂದರ್ಬಿಕ ರಜೆಯನ್ನು 10 ದಿನಗಳಿಗೆ ಇಳಿಕೆ ಮಾಡಿರುವುದರಿಂದ ಒಂದು ಬಾರಿಗೆ ಪಡೆಯಬಹುದಾದ ಗರಿಷ್ಠ ಸಾಂದರ್ಭಿಕ ರಜೆಯನ್ನು 5 ದಿನಗಳೆಂದು ನಿರ್ಬಂಧಿಸಲು ಮತ್ತು ಸಾರ್ವತ್ರಿಕ ರಜೆಯೊಂದಿಗೆ ಸಂಯೋಜನೆ ಮಾಡಿದಾಗ ಈ ಅವಧಿಯನ್ನು 8 ದಿನಗಳಿಗೆ ನಿರ್ಬಂಧಿಸಿ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ 10 ದಿನಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬಹುದು. ಆದರೆ, ಒಂದು ಬಾರಿಗೆ 5 ದಿನಗಳಿಗಿಂತ ಹೆಚ್ಚಿಗೆ ರಜೆ ಮಂಜೂರು ಮಾಡುವಂತಿಲ್ಲ. ಒಂದು ಬಾರಿಗೆ 5 ದಿನಗಳ ಪರಿಮಿತಿಯ ರಜೆ ನೀಡಬಹುದು. ಭಾನುವಾರ ಮತ್ತು ರಜಾ ದಿನಗಳನ್ನು ಹೊರತುಪಡಿಸಿ ಒಂದು ಗೈರುಹಾಜರಿಯ ಅವಧಿಯಲ್ಲಿ 5 ದಿನಗಳಿಗಿಂತ ಹೆಚ್ಚು ದಿನದ ಸಾಂದರ್ಭಿಕ ರಜೆ ಮಂಜೂರು ಮಾಡುವಂತಿಲ್ಲ. ಗೈರುಹಾಜರಿಯ ಅವಧಿಯು ಯಾವ ಸಂದರ್ಭದಲ್ಲಿಯೂ 8 ದಿನಗಳಿಗೆ ಮೀರಬಾರದು ಎಂದು ಹೇಳಲಾಗಿದೆ.