ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಮಕ್ಕಳಿಗೆ ಆರೋಗ್ಯ ಕಾರ್ಡ್ ನೀಡುವ ಕುರಿತು ಯೋಜನೆ ರೂಪಿಸಲಾಗಿದೆ.
ಈ ವರ್ಷ ಕೊರೊನಾ ಕಾರಣದಿಂದ ಶಾಲೆಗಳ ಆರಂಭ ವಿಳಂಬವಾಗುತ್ತಿದೆ. ಶಾಲೆಗಳಲ್ಲಿ ಮಕ್ಕಳಿಗೆ ಶೈಕ್ಷಣಿಕ ಪ್ರಗತಿ ಪತ್ರದ ಜೊತೆಗೆ ಆರೋಗ್ಯ ಕಾರ್ಡ್ ನೀಡಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಯೋಜನೆ ರೂಪಿಸಿದೆ.
ಶಾಲಾ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ನೀಡಬೇಕಾಗಿರುವುದರಿಂದ ಅವರ ಆರೋಗ್ಯದ ತಪಾಸಣೆ ನಿಗಾ ವಹಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಎಲ್ಲ ಮಕ್ಕಳ ಆರೋಗ್ಯ ತಪಾಸಣೆ, ಚಿಕಿತ್ಸೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮಾಹಿತಿಯನ್ನು ಒಳಗೊಂಡ ಕಾರ್ಡ್ ನೀಡಲಾಗುವುದು.
ವೈದ್ಯ ವಿದ್ಯಾರ್ಥಿಗಳ ತಂಡ ಶಾಲೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ತಪಾಸಣೆ ನಡೆಸಲಿದ್ದಾರೆ. ಕಣ್ಣು, ಉಸಿರಾಟದ ಸಮಸ್ಯೆ, ತೂಕದಲ್ಲಿ ಹೆಚ್ಚು, ಕಡಿಮೆ, ಎತ್ತರ, ಅಸ್ವಸ್ಥತೆ ಹೀಗೆ ಪ್ರಾಥಮಿಕ ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ಆರೋಗ್ಯ ಕಾರ್ಡ್ ನಲ್ಲಿ ದಾಖಲಿಸಲಾಗುವುದು. ಒಂದನೇ ತರಗತಿಯಲ್ಲಿ ಆರೋಗ್ಯ ಕಾರ್ಡ್ ಪಡೆದ ವಿದ್ಯಾರ್ಥಿ ಎಸೆಸೆಲ್ಸಿ ಮುಗಿಸುವವರೆಗೂ ಕಾರ್ಡ್ ನಿರಂತರವಾಗಿರುತ್ತದೆ.
ಆರೋಗ್ಯ ಕಾರ್ಡ್ ನಲ್ಲಿ ಅವರ ಆರೋಗ್ಯದ ಸಂಪೂರ್ಣ ಮಾಹಿತಿಯನ್ನು ಅಪ್ಡೇಟ್ ಮಾಡಲಾಗುವುದು. ಶೈಕ್ಷಣಿಕ ಪ್ರಗತಿಯ ಮಾದರಿಯಲ್ಲಿಯೇ ಆರೋಗ್ಯದ ಪ್ರಗತಿಯನ್ನು ಪರಿಶೀಲನೆ ನಡೆಸಲಾಗುವುದು. ಯಾವುದೇ ವಿದ್ಯಾರ್ಥಿಗೆ ಆರೋಗ್ಯ ಸಮಸ್ಯೆ ಇದ್ದರೆ ಹೆಚ್ಚಿನ ಚಿಕಿತ್ಸೆಯ ಅಗತ್ಯತೆ ಕಂಡು ಬಂದಲ್ಲಿ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಲಾಗುವುದು ಎಂದು ಹೇಳಲಾಗಿದೆ.