ಬಳ್ಳಾರಿ: ಪೊಲೀಸರು, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಾಲ್ಯ ವಿವಾಹವಾಗುತ್ತಿದ್ದ ನೊಂದ ಬಾಲಕಿಯ ರಕ್ಷಣೆ ಮಾಡಿದ್ದಾರೆ. ಬಾಲ್ಯ ವಿವಾಹಕ್ಕೆ ಯತ್ನಿಸಿದ ವರ, ಪುರೋಹಿತ ಸೇರಿ ಸಹಕರಿಸಿದವರೆಲ್ಲರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಬಳ್ಳಾರಿ ನಗರದ ಮಿಲ್ಲರ್ ಪೇಟೆಯ ಗುಡ್ಡ ಕೆಳಗಿನ ಯಲ್ಲಮ್ಮ ದೇವಸ್ಥಾನದ ಹತ್ತಿರ ಸಮುದಾಯ ಭವನದಲ್ಲಿ ಬಾಲ್ಯ ವಿಹಾಹ ನಡೆಯುತ್ತಿದೆ ಎಂದು ಖಚಿತ ಮಾಹಿತಿ ಮೇರೆಗೆ ಬ್ರೂಸ್ಪೇಟೆ ಪೊಲೀಸ್ ಠಾಣೆಯ ಎಎಸ್ಐ ಲೋಕರಾಜ್ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಗುರುವಾರ ದಾಳಿ ನಡೆಸಿ ಬಾಲ್ಯ ವಿವಾಹವನ್ನು ತಡೆಗಟ್ಟಿ ನೊಂದ ಬಾಲಕಿಯನ್ನು ರಕ್ಷಿಸಲಾಗಿದೆ.
ಬಾಲಕಿಯನ್ನು ಮದುವೆ ಮಾಡಿಕೊಳ್ಳುತ್ತಿದ್ದ ಸುರೇಂದ್ರ, ಬಾಲಕಿ ತಾಯಿ, ತಂದೆ, ಅಣ್ಣ, ಅಕ್ಕ ಹಾಗೂ ಚಿಕ್ಕಮ್ಮ ಮದುವೆಗೆ ಸಹಕರಿಸಿದ ಪುರೋಹಿತ ಶೇಷಗಿರಿಸ್ವಾಮಿ, ಮದುವೆಯ ಲಗ್ನಪತ್ರಿಕೆ ಮುದ್ರಿಸಿದ ಮುದ್ರಕರು ಹಾಗೂ ಮದುವೆ ಕಾರ್ಯಕ್ರಮಕ್ಕೆ ಶಾಮಿಯಾನಾ ಪೂರೈಸಿದ ಗೌಸ್ ಸೇರಿದಂತೆ ಈ ಬಾಲ್ಯ ವಿವಾಹಕ್ಕೆ ಸಹಕರಿಸಿದವರೆಲ್ಲರ ಮೇಲೆ ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಲ್ಯ ವಿವಾಹ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.