ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಗವಮದ್ದಲಖಾನೆಯಲ್ಲಿ ಪುತ್ರಿಯ ಪ್ರಿಯಕರನನ್ನು ತಂದೆಯೇ ಕೊಲೆ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವಕನ ಕುಟುಂಬದವರು ಆರೋಪಿ ಮನೆಗೆ ಬೆಂಕಿ ಹಚ್ಚಿದ್ದಾರೆ.
ಒಂದೇ ಗ್ರಾಮದ ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಯುವತಿಯ ಪೋಷಕರು ಒಪ್ಪಿರಲಿಲ್ಲ. ಪೋಷಕರು ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಯುವತಿ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಎರಡೂ ಕುಟುಂಬದವರಿಗೂ ಪೊಲೀಸರು ಬುದ್ಧಿಮಾತು ಹೇಳಿದ್ದರೂ ದ್ವೇಷ ಕಡಿಮೆಯಾಗಿರಲಿಲ್ಲ. ಮಗಳ ಸಾವಿನಿಂದ ಮನನೊಂದ ತಂದೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ನಿನ್ನೆ ರಾತ್ರಿ ಪುತ್ರಿಯ ಪ್ರಿಯಕರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಯುವಕನ ಸಂಬಂಧಿಕರು ಆರೋಪಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪ್ರೀತಿಸಿದ ಯುವಕ-ಯುವತಿ ದುರಂತ ಅಂತ್ಯ ಕಂಡಿದ್ದರೂ ಎರಡೂ ಕುಟುಂಬದವರ ದ್ವೇಷ ಮುಂದುವರೆದಿದೆ ಎಂದು ಹೇಳಲಾಗಿದೆ.