ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿದ್ದಾಳೆ.
ಸೆಪ್ಟಂಬರ್ 16 ರಂದು ರಾಘವಾಪುರ ಗ್ರಾಮದ ನಾಗರಾಜ ನಾಯ್ಕ್(35) ನಾಪತ್ತೆಯಾಗಿದ್ದು ಆತನ ಪತ್ನಿ ಮತ್ತು ಆಕೆಯ ಪ್ರಿಯಕರನಿಂದ ಕೊಲೆಯಾಗಿದ್ದಾನೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಸೆಪ್ಟೆಂಬರ್ 16 ರಂದು ಬೇಗೂರು ಠಾಣೆಗೆ ಬಂದಿದ್ದ ನಾಗರಾಜ ನಾಯ್ಕ್ ಪತ್ನಿ ಪದ್ಮಾ, ಪತಿ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ನಂತರ ನಾಗರಾಜ ನಾಯ್ಕ್ ಅವರ ತಾಯಿ ಪೊಲೀಸರಿಗೆ ದೂರು ನೀಡಿ, ಸೊಸೆ ಮತ್ತು ಆಕೆಯ ಪ್ರಿಯಕರ ಮಗನನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾರೆ. ತೊಂಡವಾಡಿ ಗ್ರಾಮದ ಮಣಿಕಂಠನೊಂದಿಗೆ ಸೇರಿ ಸೊಸೆ ಮಗನನ್ನು ಕೊಲೆ ಮಾಡಿದ್ದಾಳೆ ಎಂದು ಅವರು ಮಾಹಿತಿ ನೀಡಿದ್ದು ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪತ್ನಿ ಮಣಿಕಂಠನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ನಾಗರಾಜ್ ನಾಯ್ಕ್ ನಿಗೆ ಗೊತ್ತಾಗಿ ಅಡ್ಡಿಪಡಿಸುತ್ತಾನೆ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ. ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಸ್ಕೂಟರ್ ನಲ್ಲಿ ಮೃತದೇಹ ಸಾಗಿಸಿ ನಂಜನಗೂಡು ಸಮೀಪ ಕಬಿನಿ ನಾಲೆಗೆ ಎಸೆದಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎನ್ನಲಾಗಿದೆ.