ಸೂರ್ಯನ ಸುತ್ತ ಕಾಣಿಸಿಕೊಳ್ತು ಉಂಗುರ: ಖಗೋಳ ವಿಜ್ಞಾನದ ಮತ್ತೊಂದು ಕೌತುಕಕ್ಕೆ ಸಾಕ್ಷಿಯಾದ ಬೆಂಗಳೂರಿನ ಜನ 25-05-2021 6:29AM IST / No Comments / Posted In: Karnataka, Latest News ನಭೋ ಮಂಡಲದಲ್ಲಿ ನಡೆಯುವ ವಿಸ್ಮಯಗಳು ಒಂದೆರಡಲ್ಲ. ಅನಂತ ಕೌತುಕಗಳನ್ನ ಖಗೋಳ ವಿಜ್ಞಾನ ತನ್ನ ಒಡಲಿನಲ್ಲಿ ತುಂಬಿಕೊಂಡಿದೆ. ಸೋಮವಾರ ಇಂತಹದ್ದೇ ಒಂದು ವಿಸ್ಮಯಕ್ಕೆ ಬೆಂಗಳೂರಿಗರು ಸಾಕ್ಷಿಯಾಗಿದೆ. ಮುಂಜಾನೆ ಮೂಡಿದ ಸೂರ್ಯನ ಸುತ್ತ ಉಂಗುರದ ಮಾದರಿಯ ಆಕೃತಿ ಕಾಣಿಸಿಕೊಂಡಿದ್ದು ಹಲವು ಕುತೂಹಲಕ್ಕೆ ಕಾರಣವಾಗಿತ್ತು. ಸೂರ್ಯ ಈ ರೀತಿ ವಿಭಿನ್ನವಾಗಿ ಕಾಣಿಸಿಕೊಳ್ತಾ ಇದ್ದಂತೆ ಬೆಂಗಳೂರು ಮಂದಿ ಈ ಫೋಟೋವನ್ನ ಕ್ಲಿಕ್ಕಿಸಿ ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಶೇರ್ ಮಾಡಿದ್ದಾರೆ. ಅಂದಹಾಗೆ ಕಾಮನಬಿಲ್ಲಿನಂತೆ ಕಾಣುವ ಈ ಉಂಗುರಾಕೃತಿಯನ್ನ ಖಗೋಳ ವಿಜ್ಞಾನದ ಭಾಷೆಯಲ್ಲಿ ಹ್ಯಾಲೋ ಎಂದು ಕರೆಯಲಾಗುತ್ತೆ. ವಾತಾವರಣದಲ್ಲಿನ ಮಂಜಿನ ಕಣಗಳು ಸೂರ್ಯನ ಸುತ್ತ ಒಗ್ಗೂಡುವ ಮೂಲಕ ಉಂಗುರಾಕೃತಿಯನ್ನ ರಚಿಸುತ್ತದೆ. ಈ ವಿದ್ಯಮಾನ ಬೆಂಗಳೂರಿಗರಿಗೆ ಬಹಳ ವಿಶಿಷ್ಟವಾಗಿ ಕಂಡರೂ ಸಹ ಇದೇನು ಅಪರೂಪದ ವಿಸ್ಮಯವಲ್ಲ. ಬೆಳಕು ಹಾಗೂ ಮಂಜಿನ ಕಣಗಳು ಸಂವಹನ ನಡೆಸಿದಾಗ ವಾತಾವರಣದಲ್ಲಿ ಈ ವಿದ್ಯಮಾನ ಕಾಣಿಸಿಕೊಳ್ಳುತ್ತೆ. ಕಾಮನಬಿಲ್ಲಿನಂತೆ ಹ್ಯಾಲೋದಲ್ಲೂ ಬಣ್ಣಗಳು ಕಂಡರೂ ಸಹ ಇದು ಕಾಮನಬಿಲ್ಲಲ್ಲ. ಸೂರ್ಯನ ಸುತ್ತ ವೃತ್ತವನ್ನ ಸೃಷ್ಟಿಸೋದ್ರಿಂದ ಇದನ್ನ 22 ಡಿಗ್ರಿ ಹ್ಯಾಲೋ ಎಂದೂ ಕರೆಯಲಾಗುತ್ತೆ. ಬೆಂಗಳೂರಿನ ಹೊರಗೆ ನೀವಿದ್ದು ಉಂಗುರದೊಳಗಿನ ಸೂರ್ಯನ ಸೌಂದರ್ಯವನ್ನ ನೀವು ಕಣ್ತುಂಬಿಕೊಂಡಿಲ್ಲ ಎಂದಾದಲ್ಲಿ ಈ ಫೋಟೋಗಳು ನಿಮಗಾಗಿ :