ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗಿಂತ ಪುನರ್ ರಚನೆ ಸಾಧ್ಯತೆ ದಟ್ಟವಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿಯಾದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎನ್ನಲಾಗಿದೆ.
ಭೇಟಿಯಾಗಲು ಪಕ್ಷದ ವರಿಷ್ಠರು ಸಿಎಂಗೆ ಸೂಚನೆ ನೀಡಿದ್ದು ಇನ್ನು ಎರಡು-ಮೂರು ದಿನಗಳಲ್ಲಿ ಸಿಎಂ ದೆಹಲಿಗೆ ತೆರಳಲಿದ್ದಾರೆ. ಸಂಪುಟ ಪುನಾರಚನೆಯಾದಲ್ಲಿ ಆರೇಳು ಸಚಿವರಿಂದ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ. ಮೂವರು ಮಾಜಿ ಸಚಿವರಿಗೆ ಮತ್ತೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಇಬ್ಬರು ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗಿದೆ.
ಸಂಪುಟ ಪುನಾರಚನೆ ಜೊತೆಗೆ ಸಿಎಂ ಬದಲಾವಣೆ ಬಗ್ಗೆಯೂ ಮಾತು ಕೇಳಿ ಬರುತ್ತಿದ್ದು ಅಮಿತ್ ಶಾ ಭೇಟಿಯ ಬಳಿಕ ಸ್ಪಷ್ಟ ಚಿತ್ರಣ ಸಿಗಬಹುದೆಂದು ಹೇಳಲಾಗಿದೆ. ಅಕ್ಟೋಬರ್ ಮೊದಲ ವಾರದ ಅಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವ ಸಾಧ್ಯತೆ ಇದೆ.
ಸದ್ಯಕ್ಕೆ ಸಂಪುಟದಲ್ಲಿ 6 ಸ್ಥಾನ ಖಾಲಿ ಇವೆ. 6 -7 ಸಚಿವರಿಂದ ರಾಜೀನಾಮೆ ಪಡೆದಲ್ಲಿ 12 ಸ್ಥಾನಗಳನ್ನು ಭರ್ತಿ ಮಾಡಬೇಕಾಗುತ್ತದೆ. ಎಂಟಿಬಿ ನಾಗರಾಜ್, ಆರ್. ಶಂಕರ್, ಉಮೇಶ್ ಕತ್ತಿ, ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಸುನಿಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಅಂಗಾರ, ತಿಪ್ಪಾರೆಡ್ಡಿ, ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.