ಬೆಂಗಳೂರು: ಬಿಹಾರದಲ್ಲಿ ಚುನಾವಣೆ ಮುಗಿದು ಸರ್ಕಾರ ರಚನೆ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ದೀಪಾವಳಿ ಹಬ್ಬವೂ ಇವತ್ತು ಮುಗಿಯಲಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಡಿದ್ದು ದೆಹಲಿಗೆ ದೌಡಾಯಿಸಲಿದ್ದಾರೆ ಎನ್ನಲಾಗಿದೆ.
ಬಿಜೆಪಿ ನಾಯಕರ ಭೇಟಿಗೆ ದೆಹಲಿಗೆ ತೆರಳಲಿರುವ ಸಿಎಂ, ವರಿಷ್ಠರು ಒಪ್ಪಿಗೆ ಸೂಚಿಸಿದರೆ ಸಂಪುಟ ವಿಸ್ತರಣೆ, ಪುನಾರಚನೆ ಮಾಡಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಲಾಗಿದೆ.
ಬುಧವಾರ ಇಲ್ಲವೇ ಗುರುವಾರ ಸಿಎಂ ದೆಹಲಿಗೆ ತೆರಳಲಿದ್ದಾರೆ. ರಾಜ್ಯದಲ್ಲಿರುವ ಖಾಲಿ ಉಳಿದಿರುವ ಸಚಿವ ಸ್ಥಾನಗಳ ಜೊತೆಗೆ ಸಂಪುಟದಿಂದ ಹಲವರನ್ನು ಕೈಬಿಟ್ಟು ಹೊಸಬರಿಗೆ ಆದ್ಯತೆ ನೀಡಲು ವರಿಷ್ಠರ ಒಪ್ಪಿಗೆ ಪಡೆಯಲಿದ್ದಾರೆ.
7 ಸಚಿವ ಸ್ಥಾನಗಳು ಖಾಲಿ ಉಳಿದಿದ್ದು, ಮುನಿರತ್ನ, ಆರ್. ಶಂಕರ್, ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡಲಿದ್ದು, ಬಾಕಿ ಉಳಿದ 4 ಸ್ಥಾನಗಳಿಗೆ ತೀವ್ರ ಪೈಪೋಟಿ ಇದೆ. ಈ ಕಾರಣದಿಂದ ಕೆಲವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.