ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಹೊಸ ಪಿಂಚಣಿ ಯೋಜನೆ(NPS) ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘ ಒತ್ತಾಯಿಸಿದೆ.
ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯಲ್ಲಿ ಸರ್ಕಾರಿ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ.
ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ನಗದು ರಹಿತ ಶಸ್ತ್ರಚಿಕಿತ್ಸೆ ಸೌಲಭ್ಯ ಒದಗಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಶೀಘ್ರ ಅನುಷ್ಠಾನಕ್ಕೆ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ವಿವಿಧ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ಮಾಡಿರುವ ಕಾರಣ ನೌಕರರು ಪದೋನ್ನತಿಯಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.