ಉಡುಪಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ ಹನಿಮೂನ್ ಗೆ ಎಲ್ಲಿಗೆ ಹೋಗಬೇಕು ಎಂಬ ಬಗ್ಗೆ ಪ್ಲಾನ್ ಮಾಡುವುದು ಸಹಜ. ಆದರೆ ಇಲ್ಲೊಂದು ಜೋಡಿ ಮದುವೆ ಮುಗಿಸಿ ಹನಿಮೂನ್ ಗೆ ಹೋಗುವ ಬದಲು ಪೊರಕೆ, ಚೀಲ ಹಿಡಿದುಕೊಂಡು ಬೀಚ್ ನಲ್ಲಿ ಸ್ವಚ್ಛಾತಾ ಕಾರ್ಯದಲ್ಲಿ ತೊಡಗಿಕೊಂಡಿರುವ ಘಟನೆ ಸೋಮೇಶ್ವರ ಬೀಚ್ ನಲ್ಲಿ ನಡೆದಿದೆ.
ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡುತ್ತಿರುವ ಅನುದೀಪ್ ಹೆಗಡೆ ಹಾಗೂ ಫಾರ್ಮಸಿಟಿಕಲ್ ಉದ್ಯೋಗಿ ಮಿನುಷ ಕಾಂಚನ್ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಹಸೆಮಣೆಯೇರಿದ ಬಳಿಕ ಮಧುಚಂದ್ರಕ್ಕೆ ಹೋಗುವ ಪ್ಲಾನ್ ಮಾಡುವ ಬದಲು ಬೀಚ್ ಸ್ವಚ್ಛಗೊಳಿಸಿ, ಸಮಾಜಕ್ಕೆ ಮಾದರಿಯಾಗಿದ್ದಾರೆ.
ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಅಭಿಯಾನದಡಿ ಈ ನವ ದಂಪತಿಗಳು ಸೋಮೇಶ್ವರ ಬೀಚ್ ನಲ್ಲಿ ಲೋಡ್ ಗಟ್ಟಲೆ ಕಸ ತೆಗೆದು ಕ್ಲೀನ್ ಮಾಡಿದ್ದಾರೆ. ಹನಿಮೂನ್ ಪ್ಲಾನ್ ಬಿಟ್ಟು ಪ್ರತಿದಿನ ಎರಡು ಗಂಟೆಯಂತೆ 7 ದಿನದಲ್ಲಿ 800 ಕೆಜಿ ಕಸ ಹಾಗೂ 500 ಕೆಜಿ ಪ್ಲಾಸ್ಟಿಕ್ ವಿಲೇವಾರಿ ಮಾಡಿದ್ದಾರೆ. ನವದಂಪತಿಗಳ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯ ಸಂಘಟನೆಗಳು ಕೈಜೋಡಿಸಿದ್ದಾರೆ.