ಬೆಂಗಳೂರು: ರಾಜ್ಯ ಸರ್ಕಾರ ಖಾಸಗಿ ಸ್ಟೇಜ್ ಕ್ಯಾರಿಯೇಜ್ ಬಸ್ ಗಳ ಪ್ರಯಾಣ ದರವನ್ನು ಪರಿಷ್ಕರಿಸಿದ್ದು ಇದೇ ಮೊದಲ ಬಾರಿಗೆ ಗರಿಷ್ಠ ದರವನ್ನು ನಿಗದಿ ಮಾಡಿದೆ. ದರ ಹೆಚ್ಚಳದಿಂದ ಪ್ರಯಾಣಿಕರಿಗೆ ಹೊರೆಯಾಗಲಿದೆ ಎಂದು ಹೇಳಲಾಗಿದೆ.
ಖಾಸಗಿ ಬಸ್ ಗಳ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ. ಖಾಸಗಿ ಸ್ಟೇಜ್ ಕ್ಯಾರಿಯೇಜ್ ಬಸ್ ಗಳ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದ್ದು ಗರಿಷ್ಠ ದರವನ್ನು ನಿಗದಿ ಮಾಡಲಾಗಿದೆ. ಡೀಸೆಲ್ ದರ ಏರಿಕೆ, ವಾಹನಗಳ ನೌಕರರ ವೇತನ ಏರಿಕೆ, ಬಿಡಿಭಾಗಗಳ ಬೆಲೆ ಹೆಚ್ಚಳ ಮೊದಲಾದ ಖರ್ಚು ವೆಚ್ಚಗಳು ಹೆಚ್ಚಾಗಿರುವುದರಿಂದ ದರ ಪರಿಷ್ಕರಣೆಗೆ ಬಸ್ ಗಳ ಮಾಲೀಕರು ಮನವಿ ಮಾಡಿದ್ದರು. ಈಗ ದರ ಪರಿಷ್ಕರಣೆ ಮಾಡಲಾಗಿದೆ.
ಸ್ಟೇಟ್ ಕ್ಯಾರಿಯೇಜ್ ಬಸ್ ಗಳು ಮಹಾನಗರ ಮತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾರಿಗೆ ಸೇವೆ ನೀಡುತ್ತಿವೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿ ಸ್ಟೇಜ್ ಕ್ಯಾರಿಯೇಜ್ ಬಸ್ ಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ವ್ಯಾಪ್ತಿಯಲ್ಲಿ ಸಂಚರಿಸುವ ಸ್ಟೇಜ್ ಕ್ಯಾರಿಯೇಜ್ ಬಸ್ ಗಳಿಗೆ ಮೊದಲ ಎರಡು ಕಿಲೋಮೀಟರ್(ಸ್ಟೇಜ್ 1) ಕನಿಷ್ಠ ದರ 8 ರೂಪಾಯಿ, ನಂತರ ಎರಡು ಕಿಲೋಮೀಟರ್ 5.75 ರೂ., ನಂತರದ ಪ್ರತಿ ಎರಡು ಕಿಲೋಮೀಟರ್ 3.50 ರೂ. ದರ ನಿಗದಿ ಮಾಡಲಾಗಿದೆ.