ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇತ್ತೀಚೆಗೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರು.
ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ದೊರೆಸ್ವಾಮಿ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 104 ವರ್ಷ ವಯಸ್ಸಾಗಿತ್ತು.
1918 ಏಪ್ರಿಲ್ 10ರಂದು ಹಾರೋಹಳ್ಳಿಯಲ್ಲಿ ದೊರೆಸ್ವಾಮಿ ಜನಿಸಿದ್ದರು. ಪ್ರಾಥಮಿಕ ಶಿಕ್ಷಣದ ಬಳಿಕ ಬೆಂಗಳೂರಿಗೆ ಬಂದಿದ್ದ ಅವರನ್ನು ಮಹಾತ್ಮಾ ಗಾಂಧಿ ಅವರ ’ಮೈ ಅರ್ಲಿ ಲೈಫ್’ ಪುಸ್ತಕ ಭಾರತದ ಸ್ವಾತಂತ್ರ್ ಚಳುವಳಿಯಲ್ಲಿ ಸೇರಲು ಪ್ರಭಾವ ಬೀರಿತು.
ನಂದಿಬೆಟ್ಟದಲ್ಲಿ ಗಾಂಧೀಜಿಯವರ ಭಾಷಣದಿಂದ ಪ್ರಭಾವಿತರಾಗಿದ್ದ ದೊರೆಸ್ವಾಮಿ, ವಿವಿಧ ಸ್ವಾತಂತ್ರ್ಯ ಪರ ಹೋರಾಟದಲ್ಲಿ ತೊಡಗಿಸಿಕೊಂಡರು. ಅಲ್ಲದೇ ಕಾಲೇಜು ಉಪನ್ಯಾಸಕರಾಗಿ, ಪತ್ರಕರ್ತರಾಗಿಯೂ ಕಾರ್ಯ ನಿರ್ವಹಿಸಿದ್ದ ಅವರು ಪೌರವಾಣಿ ಪತ್ರಿಕೆ ನಡೆಸುವ ಹೊಣೆ ಹೊತ್ತಿದ್ದರು.
1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ 14 ದಿನಗಳ ಕಾಲ ಜೈಲುವಾಸ ಅನುಭವಿಸಿದರು. ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದ ದೊರೆಸ್ವಾಮಿ ಭೂ ಕಬಳಿಕೆ ವಿರುದ್ಧವೂ ಹೋರಾಟ ನಡೆಸಿದ್ದರು.