ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದ್ದು, ಸಿಡಿಯಲ್ಲಿದ್ದ ಯುವತಿ ಜೊತೆಗೆ ಮಾಜಿ ಸಚಿವ ಡಿ.ಸುಧಾಕರ್ ನಂಟಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಎಸ್ ಐ ಟಿ ತನಿಖೆ ವೇಳೆ ಯುವತಿ, ಡಿ.ಸುಧಾಕರ್ ಜೊತೆ ಫೋನ್ ಸಂಪರ್ಕದಲ್ಲಿದ್ದಳು. ಅಲ್ಲದೇ ಸಿಡಿ ಪ್ರಕರಣ ಬಯಲಾಗುವ ಎರಡು ದಿನಗಳ ಮೊದಲು ಡಿ.ಸುಧಾಕರ್ ಹಾಗೂ ಯುವತಿ ನಡುವೆ ಹಣದ ವ್ಯವಹಾರ ನಡೆದಿದೆ ಎಂಬ ಮಾಹಿತಿ ತಿಳಿದುಬಂದಿದೆ ಎನ್ನಲಾಗಿದೆ.
ಜಾರಕಿಹೊಳಿ ಸಿಡಿ’ ಯುವತಿಯೊಂದಿಗೆ ಮಾಜಿ ಸಚಿವ ಸುಧಾಕರ್ ಸಂಪರ್ಕ, ಲಕ್ಷಾಂತರ ರೂ. ವ್ಯವಹಾರ..?
ಆದರೆ ಈ ಆರೋಪಗಳನ್ನು ತಳ್ಳಿ ಹಾಕಿರುವ ಮಾಜಿ ಸಚಿವ ಡಿ.ಸುಧಾಕರ್, ತನಗೂ ಈ ಸಿಡಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕುತ್ತಿರುವುದು ನೋಡಿದರೆ ನನಗೆ ಅಚ್ಚರಿಯಾಗುತ್ತಿದೆ. ಸಿಡಿ ಯುವತಿಗೂ ನನಗೂ ಯಾವುದೇ ಸಂಬಂಧವಿಲ್ಲ, ಹಣವನ್ನೂ ನೀಡಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಸುಧಾಕರ್, ನನಗೆ ಯಾರೂ ಕೂಡ ಬ್ಲಾಕ್ ಮೇಲ್ ಮಾಡಿಲ್ಲ. ನಾನು ಹಣವನ್ನೂ ನೀಡಿಲ್ಲ. ಈ ಪ್ರಕರಣದಲ್ಲಿ ಮೊದಲಿನಿಂದ ಮಾಜಿ ಸಚಿವರೊಬ್ಬರಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈಗ ನನ್ನ ಹೆಸರನ್ನು ತಳುಕು ಹಾಕಲಾಗುತ್ತಿದೆ. ನನಗೆ ಅಂತಹ ಭಯವಿದ್ದಿದ್ದರೆ ಇಂಜಂಕ್ಷನ್ ಆರ್ಡರ್ ಪಡೆಯುತ್ತಿದ್ದೆ. ನನಗೆ ಈ ಪ್ರಕರಣದಲ್ಲಿ ಸಂಬಂಧವೇ ಇಲ್ಲ ಎಂದ ಮೇಲೆ ನಾನ್ಯಾಕೆ ಭಯ ಪಡಲಿ? ಎಸ್ ಐ ಟಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಕರೆದರೆ ಹೋಗಿ ಉತ್ತರಿಸುತ್ತೇನೆ ಎಂದು ಹೇಳಿದರು.