ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿಗೆ ಲಸಿಕೆ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ, ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಸಿದ್ಧತೆ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ರಾಜ್ಯಾದ್ಯಂತ 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಿದ್ದು, ಲಸಿಕೆ ವಿತರಣೆ ಮಾಡಲು 10,008 ವ್ಯಾಕ್ಸಿನೇಟರ್ ಸಿಬ್ಬಂದಿಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ ಲಸಿಕೆ ಸಂಗ್ರಹ ಮತ್ತು ವಿತರಣೆಗೆ 2,855 ಕೋಲ್ಡ್ ಚೇನ್ ಕೇಂದ್ರ ಲಭ್ಯವಿದ್ದು, ಶೀಘ್ರ ಲಸಿಕೆ ವಿತರಣೆ ಮಾಡಲು ಸಾಧ್ಯವಾಗುವಂತೆ ಬೆಂಗಳೂರು ನಗರ, ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾದೇಶಿಕ ಲಸಿಕೆ ಸಂಗ್ರಹ ಕೇಂದ್ರಗಳನ್ನು ಆರಂಭಿಸಲು ಪ್ರಸ್ತಾಪಿಸಲಾಗಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ ಈಗಾಗಲೇ ಡೀಪ್ ಫ್ರೀಜರ್ ಹಾಗೂ ರೆಫ್ರಿಜರೇಟರ್ ಗಳನ್ನು ಮಂಜೂರು ಮಾಡಿದೆ. ರಾಜ್ಯದಲ್ಲಿ 10 ವಾಕ್ ಇನ್ ಕೂಲರ್ ಮತ್ತು 4 ವಾಕ್ ಇನ್ ಫ್ರೀಜರ್ ಇದ್ದು, ಕೇಂದ್ರ ಆರೋಗ್ಯ ಸಚಿವಾಲಯ 3 ವಾಕ್ ಇನ್ ಕೂಲರ್, 2 ವಾಕ್ ಇನ್ ಫ್ರೀಜರ್ ನೀಡಲಿದೆ. ಇದಕ್ಕಾಗಿ ಸಿವಿಲ್ ಕಾಮಗಾರಿ ಆರಂಭವಾಗಿದೆ. ಕೋಲ್ಡ್ ಸ್ಟೋರೇಜ್ ಮತ್ತು ಸಂಗ್ರಹಕ್ಕೆ ಸಂಬಂಧಿಸಿದಂತೆ, ಡೋಸ್ ಗಳು ಮತ್ತಿತರ ಮಾಹಿತಿಯನ್ನು ಶೀಘ್ರ ಒದಗಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕೋರಲಾಗಿದೆ. ಲಸಿಕೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಡ್ರೈ ಸ್ಟೋರೇಜ್ ಬಗ್ಗೆಯೂ ನಿರ್ಧಾರ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.