ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಲೇಡಿ ಡಿ.ಕೆ.ಶಿ. ಭೇಟಿಗೆ ಪ್ರಯತ್ನಿಸಿದ್ದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಯುವತಿ ನಮ್ಮ ಕಚೇರಿಗೆ ಬಂದಿರಬಹುದು. ಆದರೆ ಆ ಯುವತಿ ನನ್ನನ್ನು ಭೇಟಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕಷ್ಟ ಎಂದು ಹೇಳಿಕೊಂಡು ದಿನಕ್ಕೆ ನಮ್ಮ ಕಚೇರಿಗೆ ಹಲವರು ಬರುತ್ತಾರೆ. ಅಂತೆಯೇ ಆ ಯುವತಿಯೂ ಬಂದಿರಬಹುದು. ಆದರೆ ಆಕೆ ನನ್ನನ್ನು ಭೇಟಿಯಾಗಿಲ್ಲ. ನೊಂದವರು ಪ್ರಾಮಾಣಿಕರಾಗಿದ್ದರೆ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದರು.
ಸಿಡಿ ಪ್ರಕರಣದ ಶಂಕಿತ ಆರೋಪಿ, ಮಾಜಿ ಪತ್ರಕರ್ತ ನರೇಶ್ ಬಗ್ಗೆ ಮಾತನಾಡಿದ ಡಿ.ಕೆ.ಶಿ., ನರೇಶ್ ನಮಗೆ ಬೇಕಾದ ಹುಡುಗ. ಆತ ನಮಗೆಲ್ಲ ಮೊದಲಿನಂದಲೂ ಪರಿಚಯದ ವ್ಯಕ್ತಿ, ಮೀಡಿಯಾದವನು. ನಾನು ಹಲವು ಬಾರಿ ಆತನ ಮನೆಗೂ ಭೇಟಿ ನೀಡಿದ್ದೇನೆ. ನಮಗೆ ಕೆಲ ವಿಚಾರ ಆತ ತಿಳಿಸಿದ್ದು ನಿಜ. ನಾವು ಆತನಿಂದ ಕೆಲ ವಿಷಯ ಪಡೆದುಕೊಂಡಿದ್ದು ನಿಜ. ಅದೆಲ್ಲ ಬೇರೆ ವಿಚಾರ ಅದ್ಯಾವುದೂ ಈ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎಂದರು.
ಇನ್ನು ರಾಜಕೀಯವಾಗಿ ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ 5 ಶಾಸಕರನ್ನು ಸೆಳೆಯುವುದಾಗಿ ಹೇಳಿಕೆ ನೀಡಿದ್ದರು. ಹಾಗಾಗಿ ನಾವು ಟ್ರ್ಯಾಕ್ ಹಾಕಿದ್ದು ನಿಜ. ಅದನ್ನು ನಾವೇ ಸದನದಲ್ಲಿ ಹೇಳಿದ್ದೇವೆ. ಅದು ರಾಜಕೀಯ ವಿಚಾರವಾಗಿ ತಿಳಿದುಕೊಳ್ಳಲಷ್ಟೇ. ಆದರೆ ಇದು ವೈಯಕ್ತಿಕ. ಇದು ನಮಗೆ ಅನವಶ್ಯಕವಾದ ವಿಚಾರ ಈ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.