ಬೆಂಗಳೂರು: ನಾನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಯಾವತ್ತೂ ಹೋಗಿಲ್ಲ. ಅವರ ನಾಯಕತ್ವದ ವಿರುದ್ಧವೂ ಯಾವುದೇ ದೂರೂ ನೀಡಿಲ್ಲ. ಯಡಿಯೂರಪ್ಪ ನನಗೆ ರಾಜಕೀಯ ಪಾಠ ಹೇಳಿಕೊಟ್ಟವರು. ಆದರೆ ಸದ್ಯದ ರಾಜಕೀಯ ಅವ್ಯವಸ್ಥೆ ವಿರುದ್ಧ ಮಾತ್ರ ನಮಗೆ ಅಸಮಾಧಾನವಿದ್ದು ಅದನ್ನು ಸರಿಪಡಿಸಬೇಕೆಂದು ದೂರು ನೀಡುತ್ತಿದ್ದೇವೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆ ಸೂರಗೊಂಡಕೊಪ್ಪದಲ್ಲಿ ಮಾತನಾಡಿದ ರೇಣುಕಾಚಾರ್ಯ, ನಾವ್ಯಾರೂ ಅಸಮಾಧಾನಿತ ಶಾಸಕರಲ್ಲ, ಅತೃಪ್ತರೂ ಅಲ್ಲ. ದೆಹಲಿಗೆ ಹೋದಾಗ ಯಡಿಯೂರಪ್ಪ ವಿರುದ್ಧ ಯಾವುದೇ ದೂರನ್ನೂ ನೀಡಿಲ್ಲ. ಯಡಿಯೂರಪ್ಪನವರೇ ನಮ್ಮ ನಾಯಕರು. ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ನನ್ನ ಬಾಯಲ್ಲಿ ಹುಳ ಬೀಳುತ್ತೆ ಎಂದಿದ್ದಾರೆ.
ನಾಳೆ ನಾವು ಮತ್ತೆ ದೆಹಲಿಗೆ ತೆರಳುತ್ತಿದ್ದೇವೆ. ಕೆಲ ಶಾಸಕರು ಸಭೆಯನ್ನು ಸೇರುತ್ತಿದ್ದೇವೆ. ಈಗಿರುವ ಅವ್ಯವಸ್ಥೆ, ಲೋಪದೋಷ ಸರಿ ಪಡಿಸುವ ನಿಟ್ಟಿನಲ್ಲಿ ಸಭೆ ನಡೆಸುತ್ತೇವೆ. ಬಿಜೆಪಿ ವರಿಷ್ಠರ ಬಳಿ ವ್ಯವಸ್ಥೆ ಸರಿಪಡಿಸಲು ಹೇಳುತ್ತೇನೆ. ನಮ್ಮಲ್ಲಿ ಯಾವುದೇ ಗೊಂದಲಗಳೂ ಇಲ್ಲ.
ಇನ್ನು ಸಿ.ಪಿ.ಯೋಗೇಶ್ವರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಬೈ ಎಲೆಕ್ಷನ್ ನಲ್ಲಿ ಅನಿತಾ ಕುಮಾರಸ್ವಾಮಿ ಜೊತೆ ಯೋಗೇಶ್ವರ್ ಒಳ ಒಪ್ಪಂದ ಮಾಡಿಕೊಂಡಿದ್ದರು. ಬಿಜೆಪಿಯವರು ಸೋಲಲು ಯೋಗೇಶ್ವರ್ ಕಾರಣ. ಒಳ ಒಪ್ಪಂದ ಮಾಡಿಕೊಂಡು ಈಗ ನನ್ನಿಂದಲೇ ಬಿಜೆಪಿ ಅಧಿಕಾರಕ್ಕೆ ಬಂತು ಎಂದು ಹೇಳುತ್ತಿದ್ದಾರೆ ಎಂದು ಗುಡುಗಿದರು.