ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ನೈಟ್ ಕರ್ಫ್ಯೂನಲ್ಲಿ ಕೆಲ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇಂದು ರಾತ್ರಿಯಿಂದಲೇ ಏಕಾಏಕಿ ನೈಟ್ ಕರ್ಫ್ಯೂ ಜಾರಿಯಾದರೆ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಇಂದು ರಾತ್ರಿ ಬದಲಾಗಿ ನಾಳೆ ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ. ಅಲ್ಲದೇ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆ ಬದಲಾಗಿ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಜನವರಿ 2 ರವರೆಗೆ 9 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ.
* ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಡಿಸೆಂಬರ್ 24 ಹಾಗೂ 25 ರಂದು ವಿಶೇಷ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ.
* ರಾತ್ರಿ ಬಸ್, ರೈಲು, ವಿಮಾನ ಸಂಚಾರದಲ್ಲಿ ಯಾವುದೇ ವ್ಯತ್ಯಯವಿಲ್ಲ.
* ಏರ್ ಪೋರ್ಟ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಿಗೆ ಆಟೋ, ಟ್ಯಾಕ್ಸಿಗಳು ಪ್ರಯಾಣಿಕರನ್ನು ಪಿಕಪ್ ಡ್ರಾಪ್ ಮಾಡಲು ಅವಕಾಶ.
* ಗೂಡ್ಸ್ ವಾಹನಗಳಿಗೆ, ಕೈಗಾರಿಕೋದ್ಯಮಗಳಿಗೆ ಯಾವುದೇ ನಿರ್ಬಂಧವಿಲ್ಲ.
* ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಾರ್ಖಾನೆಗಳಿಗೆ ಯಾವುದೇ ನಿರ್ಬಂಧವಿಲ್ಲ.