ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದರೂ ಕೂಡ ಮೀಸಲಾತಿ ಬಗ್ಗೆ ಸರ್ಕಾರ ಘೋಷಿಸದ ಹಿನ್ನೆಲೆಯಲ್ಲಿ ಬಸವ ಜಯ ಮೃತ್ಯುಂಜಯ ಸಾಮೀಜಿ ನೇತೃತ್ವದಲ್ಲಿ ಹೋರಾಟಗಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮಧ್ಯಾಹ್ನ 2ಗಂಟೆಯೊಳಗೆ ಘೋಷಿಸಬೇಕು. ಇಲ್ಲವಾದಲ್ಲಿ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಅರಮನೆ ಮೈದಾನದಿಂದ ವಿಧಾನಸೌಧದತ್ತ ಪಂಚಮಸಾಲಿ ಹೋರಾಟಗಾರರು ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಈ ವೇಳೆ ಕಾವೇರಿ ಜಂಕ್ಷನ್ ಬಳಿ ಪೊಲೀಸರು ಪಾದಯಾತ್ರೆಗೆ ತಡೆಯೊಡ್ದಿದ್ದಾರೆ.
ಕಾವೇರಿ ಜಂಕ್ಷನ್ ಬಳಿ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನಾನಂದ ಸ್ವಾಮೀಜಿಯನ್ನು ತಡೆದ ಪೊಲೀಸರು, ಪಾದಯಾತ್ರೆ ಕೈಬಿಡುವಂತೆ ಮನವಿ ಮಾಡಿದ್ದಾರೆ. ಪೊಲಿಸರ ಮನವಿಗೂ ಒಪ್ಪದ ಸ್ವಾಮೀಜಿಗಳು ಪಾದಯಾತ್ರೆ ಮುಂದುವರೆಸಲು ಯತ್ನಿಸಿದ್ದಾರೆ. ಈ ವೇಳೆ ರಸ್ತೆಗೆ ಬ್ಯಾರಿಕೇಡ್ ಗಳನ್ನು ಹಾಕಿದ ಪೊಲೀಸರು ಪಾದಯಾತ್ರೆಯನ್ನು ರಸ್ತೆ ಮಧ್ಯೆ ತಡೆದಿದ್ದಾರೆ. ಕಾವೇರಿ ಜಂಕ್ಷನ್ ಬಳಿ ಪಾದಯಾತ್ರೆ ತಡೆದ ಹಿನ್ನೆಲೆಯಲ್ಲಿ ಹೋರಾಟಗಾರರು ರೈಲ್ವೆ ಸಮಾನಾಂತರ ರಸ್ತೆ ಮೂಲಕ ಪರ್ಯಾಯ ಮಾರ್ಗವಾಗಿ ಪಾದಯಾತ್ರೆ ನಡೆಸಲು ಯತ್ನಿಸಿದ್ದಾರೆ.