ಬೆಂಗಳೂರು: ಡಿವೈಎಸ್ ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣದ ಸುತ್ತ ಅನುಮಾನದ ಹುತ್ತ ಆರಂಭವಾಗಿದೆ. ತನ್ನ ಮಗಳ ಸಾವು ಅನುಮಾನಾಸ್ಪದ ಸಾವು. ಆಕೆಯ ಸ್ನೇಹಿತರಾದ ಮನು ಹಾಗೂ ಪ್ರಜ್ವಲ್ ಹೇಳಿಕೆಯ ಮೇಲೆ ಅನುಮಾನವಿದೆ ಎಂದು ಡಿವೈಎಸ್ ಪಿ ಲಕ್ಷ್ಮೀ ತಂದೆ ವೆಂಕಟೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳಿಗೆ ಹಣ, ಅಧಿಕಾರ, ಮನೆ ಎಲ್ಲವೂ ಇತ್ತು. ಆಕೆ ಯಾವುದೇ ಖಿನ್ನತೆಯಿಂದ ಬಳಲುತ್ತಿರಲಿಲ್ಲ. ಎಲ್ಲವೂ ಇರುವಾಗ ಆಕೆ ಯಾಕೆ ಖಿನ್ನತೆಗೆ ಹೋಗಬೇಕು. ಆತ್ಮಹತ್ಯೆ ಮಾಡಿಕೊಳ್ಳಬೇಕು? ನನ್ನ ಮಗಳ ಸಾವಿನ ಬಗ್ಗೆ ಅನುಮಾನವಿದೆ. ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ.
ಆಕೆಯ ಸ್ನೇಹಿತರಾದ ಮನು, ಪ್ರಜ್ವಲ್ ಹೇಳುವ ಪ್ರಕಾರ ಡಿವೈ ಎಸ್ ಪಿ ಲಕ್ಷ್ಮೀ ತನ್ನ ಪತಿ ಹೈದರಾಬಾದ್ ಗೆ ಹೋಗಿದ್ದಾರೆ ಎಂದು ಬೇಜಾರಲ್ಲಿದ್ದರು. ಊಟ ಮುಗಿಸಿ ರೂಮಿಗೆ ಹೋಗಿದ್ದಾರೆ. ಎಷ್ಟೊತ್ತಾದರೂ ಹೊರ ಬಾರದಿದ್ದಾಗ ಬಾಗಿಲು ಒದ್ದು ಒಳ ಹೋಗಿ ನೋಡಿದರೆ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಕಾಲು ಕೂಡ ನೆಲಕ್ಕೆ ತಾಗಿಕೊಂಡಿತ್ತು ಎಂದು ಹೇಳಿದ್ದಾರೆ.
ಆದರೆ ಅವರ ಈ ಹೇಳಿಕೆ ಹಲವು ಅನುಮಾನ ಮೂಡಿಸಿದೆ. ನನ್ನ ಮಗಳಿಗೆ ಬೇಜಾರಿದ್ದರೆ ಅಥವಾ ಮಾನಸಿಕ ಒತ್ತಡವಿದ್ದರೆ ಆಕೆ ತನ್ನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಳು. ಬೇರೆಯವರ ಮನೆಗೆ ಹೋಗಿ ಯಾಕೆ ಹೀಗೆ ಮಾಡಿಕೊಳ್ಳುತ್ತಿದ್ದಳು? ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಮನು ಹಾಗೂ ಪ್ರಜ್ವಲ್ ಬಗ್ಗೆ ನನಗೆ ಅನುಮಾನವಿದೆ ಈ ನಿಟ್ಟಿನಲ್ಲಿ ದೂರು ನೀಡಿದ್ದಾಗಿ ತಿಳಿಸಿದ್ದಾರೆ.