ಬೆಂಗಳೂರು: ಡಿನೋಟೀಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಬೆಳ್ಳಂದೂರು ಬಳಿಯ ಜಮೀನು ಡಿನೋಟೀಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಪ್ರಕರಣ ರದ್ದು ಮಾಡಲು ಹೈಕೋರ್ಟ್ ಏಕಸದಸ್ಯಪೀಠ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪನವರಿಗೆ ಸಂಕಷ್ಟ ಎದುರಾಗಿದೆ.
ವಾಸುದೇವರೆಡ್ಡಿ ಎಂಬುವವರು 2013ರಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಲೋಕಾಯುಕ್ತ ವಿಶೇಷ ಕೋರ್ಟ್ ತನಿಖೆಗೆ ಆದೇಶ ನೀಡಿತ್ತು. ಮಾಜಿ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧವೂ ಕೇಸ್ ದಾಖಲಾಗಿತ್ತು. ನ್ಯಾ.ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯಪೀಠ ಆದೇಶ ಹೊರಡಿಸಿದೆ.